ಬೆಳಗಾವಿ ಮಹಾನಗರದಲ್ಲ್ಲಿ ವಾಹನ ದಟ್ಟನೆ ಕಡಿಮೆ ಮಾಡುವದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಪಿರಣವಾಡಿವರೆಗೆ ರಸ್ತೆ ಮೇಲ್ಸುತುವೆ ನಿರ್ಮಿಸಲು ವಿವರವಾದ ಯೋಜನಾ ವರದಿಯನ್ನು ತಾಯರಿಸುವಂತೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ಲೋಕೊಪಯೋಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬೆಳೆಯುತ್ತಿರುವ ಬೆಳಗಾವಿ ನಗರದ ವಾಹನ ಸಂಚಾರ ದಟ್ಟಣೆಯನ್ನು ತಪ್ಪಿಸಲು 2018ರಲ್ಲಿ ಸ್ಮಾರ್ಟ ಸಿಟಿ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ 4 ರಿಂದ ಗಾಂಧಿ ನಗರ ಮೂಲಕ ಆಶೋಕ ವೃತ್ತದ ಮೂಲಕ ಕೇಂದ್ರ ಬಸ್‌ ನಿಲ್ದಾಣವರೆಗೆ ಮೇಲ್ಸುತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಅದು ಅನುದಾನದ ಕೊರತೆಯಿಂದ ವಿಸ್ತೃತ ಯೋಜನಾ ವರದಿ ತಯಾರಿಸುವ ಮುಂಚೆಯೇ ನೆನಗುದಿಗೆ ಬಿದ್ದಿತು. ಈ ಯೋಜನೆಗಾಗಿ ವಿಶೇಷ ಆಸಕ್ತಿ ವಹಿಸಿದ್ದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೋಳಿ ಅವರು ಮತ್ತೆ ಆ ಯೋಜನೆಗೆ ಮರುಜೀವ ನೀಡಲು ಉತ್ಸುಕರಾಗಿದ್ದಾರೆ.

ಈ ಮೊದಲು ಎನ್‌ಎಚ್-4 ಜಂಕ್ಷನ್‌ನಿಂದ ಅಶೋಕ ಸರ್ಕಲ್‌ಗೆ ಪ್ರಾರಂಭವಾಗುವ ಯೋಜನೆಯಾಗಿತ್ತು, ಅಲ್ಲಿಂದ ಖಡೇ ಬಜಾರ್ ರಸ್ತೆ ತಿರುವು ಪಡೆದು ಸರ್ಕ್ಯೂಟ್ ಹೌಸ್ ಮೂಲಕ ಹಾದು ಸಿಬಿಟಿಯಲ್ಲಿ ಕೊನೆಗೊಳ್ಳುತ್ತಿತ್ತು. ಗಾಂಧಿನಗರ ಜಂಕ್ಷನ್, ಮಹಾಂತೇಶ ನಗರ ಜಂಕ್ಷನ್, ಅಶೋಕ ಸರ್ಕಲ್ ಜಂಕ್ಷನ್, ಮತ್ತು ತರಕಾರಿ ಮಾರುಕಟ್ಟೆ ಜಂಕ್ಷನ್ ಈ ಮೊದಲಿನ ಯೋಜನೆ ಒಳಗೊಂಡಿತ್ತು. ಆದರೆ ತರಕಾರಿ ಮಾರುಕಟ್ಟೆ ನಗರದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ತಲೆ ಎತ್ತಿದ್ದರಿಂದ ಈಗ ಹಳೆ ತರಕಾರಿ ಮಾರುಕಟ್ಟೆ ಹತ್ತಿರ ವಾಹಣ ದಟ್ಟಣೆ ಕಡಿಮೆಯಾಗಿದೆ.

 ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಶೋಕ ವೃತ್ತದಿಂದ (ಎನ್‌ಎಚ್ 4 ಜಂಕ್ಷನ್‌ನಿಂದ ರಾಯಚೂರು ಬಾಚಿ ರಸ್ತೆ ಮೂಲಕ ಸಿಬಿಟಿವರೆಗೆ) 129 ಕೋಟಿ ವೆಚ್ಚದ ಮೇಲ್ಸೇತುವೆಯನ್ನು ಉಲ್ಲೇಖಿಸಲಾಗಿದೆ. ಆದಾಗ್ಯೂ, ಹೊಸ ಯೋಜನೆಯು ಹೆಚ್ಚು ಮಹತ್ವಾಕಾಂಕ್ಷೆಯದ್ದಾಗಿದೆ, ಗಾಂಧಿ ನಗರ ರಾಷ್ಟ್ರೀಯ ಹೆದ್ದಾರಿಯಿಂದ ಎಲಿವೇಟೆಡ್ ರಸ್ತೆಯಿಂದ ಪೀರನವಾಡಿಯವರೆಗೆ ಯೋಜನೆ ರೂಪಿಸಲಾಗುತ್ತಿದೆ. ವಿವಿಧ ಸ್ಥಳಗಳಲ್ಲಿ ಪ್ರವೇಶ ಮತ್ತು ನಿರ್ಗಮನದೊಂದಿಗೆ ಮೇಲ್ಸೇತುವೆಯನ್ನು ಕಲ್ಪಿಸಲಾಗುತ್ತದೆ.

2015ರಲ್ಲೇ ಗಾಂಧಿ ನಗರದಿಂದ ಸಿಬಿಟಿವರೆಗೆ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು, ಆದರೆ ಅದನ್ನು ನಂತರ 100 ಕೋಟಿ ರೂ.ಗಳ ಪ್ರಸ್ತಾವನೆಯೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಯಿತು. ಆದರೂ ಕೂಡ ರಸ್ತೆ ಮೇಲ್ಸುತುವೆ ವೆಚ್ಚವು 185 ಕೋ.ರೂ.ಗಳಿಗೆ ಹೆಚ್ಚಾದ ಕಾರಣ ರಾಜ್ಯ ಸರ್ಕಾರವು ಅನುದಾನ ನೀಡದ ಕಾರಣ ಯೋಜನೆ ಮೇಲೇಳಲೇ ಇಲ್ಲ.