ಬೆಳಗಾವಿ : ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗದ ಕಾಯಂ ಪೀಠ ಸ್ಥಾಪನೆ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದೆ.
ನಗರದ ಖಾನಾಪುರ ರಸ್ತೆಯ ಟೆಲಿಫೋನ್ ಎಕ್ಸ್‌ಚೇಂಜ್ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.
ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಆಯೋಗದ ಕಾಯಂ ಪೀಠ ಸ್ಥಾಪನೆ ಮಾಡುವಂತೆ ಇಲ್ಲಿನ ನ್ಯಾಯವಾದಿಗಳು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರು.
ಲೋಕೋಪಯೋಗಿ ಇಲಾಖೆ ಆದೇಶವನ್ನು ರಾಜ್ಯ ಗ್ರಾಹಕರ ಆಯೋಗಕ್ಕೆ ಕಳುಹಿಸಲಾಗುತ್ತದೆ. ಗ್ರಾಹಕರ ಆಯೋಗದ ಒಪ್ಪಿಗೆ ಬಳಿಕ ಬೆಳಗಾವಿಯಲ್ಲಿ ಕಾಯಂ ಪೀಠ ಸ್ಥಾಪನೆಯಾಗುತ್ತದೆ.
ಈ ಪೀಠ ಸ್ಥಾಪನೆಗೆ 2 ವರ್ಷಗಳ ಹಿಂದೆ ಕಾಯಂ ಪೀಠ ಮಂಜೂರಾಗಿತ್ತು. ಆದರೆ ಕಚೇರಿ ಕಟ್ಟಡ ಲಭ್ಯವಾಗದೆ ಪೀಠ ಸ್ಥಾಪನೆ ನನೆಗುದಿಗೆ ಬಿದ್ದಿತ್ತು. ಡಿ.4ರಂದು ಅಹಿಂದ ನ್ಯಾಯವಾದಿಗಳ ಸಂಘಟನೆ ವತಿಯಿಂದ ನಗರದಲ್ಲಿ ರಸ್ತೆ ಸಂಚಾರ ತಡೆದು, ನ್ಯಾಯವಾದಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಹೋರಾಟಕ್ಕೆ ಮಣಿದ ಸರಕಾರ ಕಾಯಂ ಪೀಠ ಸ್ಥಾಪನೆಗೆ ಕಟ್ಟಡ ಗುರುತಿಸಿದೆ. ಟೆಲಿಫೋನ್ ಎಕ್ಸ್‌ಚೇಂಜ್ ಕಟ್ಟಡದ 593.77 ಚ.ಮೀ. ವಿಸ್ತೀರ್ಣದ ಮೊದಲ ಮಹಡಿಯನ್ನು ಗ್ರಾಹಕರ ಆಯೋಗದ ಕಾಯಂ ಪೀಠ ಸ್ಥಾಪನೆಗೆ ಬಾಡಿಗೆ ಆಧಾರದಲ್ಲಿ ನೀಡಲು ಕ್ರಮ ವಹಿಸುವಂತೆ ಲೋಕೋಪಯೋಗಿ ಇಲಾಖೆಯ ಧಾರವಾಡದ ಮುಖ್ಯ ಎಂಜಿನಿಯರ್ ಬೆಳಗಾವಿಯ ಅಧೀಕ್ಷಕ ಎಂಜಿನಿಯರ್‌ಗೆ ಪತ್ರ ಬರೆದು ಸೂಚಿಸಿದ್ದಾರೆ. ಇದಕ್ಕೆ ಮಾಸಿಕ 59,300 ರೂ. ಬಾಡಿಗೆ ನಿಗದಿಪಡಿಸಲಾಗಿದೆ.