ಬೆಳಗಾವಿ:, ಅರಣ್ಯ ಇಲಾಖೆಯು ಯಾವುದೇ ಕುಟುಂಬವನ್ನು ಒತ್ತಾಯಪೂರ್ವಕಾಗಿ ಅರಣ್ಯದಿಂದ ಹೊರಗೆ ಹಾಕುತ್ತಿಲ್ಲ. ಸ್ವ ಇಚ್ಚೆಯಿಂದ ಸ್ಥಳಾಂತರಕ್ಕೆ ಲಿಖಿತವಾಗಿ ಒಪ್ಪಿಗೆ ನೀಡುವ ಕುಟುಂಬಗಳಿಗೆ ಮಾತ್ರ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗಿದೆ.
ಫಲಾನುಭವಿಗಳಿಗೆ ಸರಕಾರದ ವಿವಿಧ ವಸತಿ ಯೋಜನೆಗಳಡಿ ಮನೆಗಳನ್ನು ಮಂಜೂರು ಮಾಡಲು ಕ್ರಮ ವಹಿಸಲಾಗುವುದು. ಇದಲ್ಲದೇ ಒಂದು ಎಕರೆ ಜಮೀನು‌ ಖರೀದಿಸಿ ಕೊಡುವ ನಿಟ್ಟಿನಲ್ಲಿ ಸರಕಾರದ‌ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಂದಿಲ್ಲಿ ಭರವಸೆ ನೀಡಿದರು.
ಅರಣ್ಯದಿಂದ ಸ್ಥಳಾಂತರಗೊಂಡ ನಿವಾಸಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು,ಅರಣ್ಯ ನಿವಾಸಿಗಳು ಕಾಡುಪ್ರಾಣಿಗಳ ದಾಳಿಯಿಂದ ಸದಾ ಪ್ರಾಣಭಯದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ಸ್ವಯಂ ಇಚ್ಚೆಯಿಂದ ಸ್ಥಳಾಂತರಕ್ಕೆ ಮುಂದಾದ ಕುಟುಂಬಗಳಿಗೆ ನಿಯಮಾನುಸಾರ ಮಿದಲ ಹಂತದಲ್ಲಿ ಹತ್ತು ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ.
ಒಂದು ಕುಟುಂಬದಲ್ಲಿ ಮೂರು ಜನರಿದ್ದರೆ ಮೂರೂ ಜನರಿಗೆ ತಲಾ ಹದಿನೈದು ಲಕ್ಷ ರೂಪಾಯಿ ನೀಡಲಾಗುತ್ತಿದೆ.
ಅರಣ್ಯ ನಿವಾಸಿಗಳ ಶಾಶ್ವತ ಪುನರ್ವಸತಿಗಾಗಿ 500 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಕೂಡ ಮಾಡಿಕೊಳ್ಳಲಾಗಿದೆ.
ಅನೇಕ ನದಿಗಳ ಮೂಲ ಪಶ್ಚಿಮ ಘಟ್ಟ. ದಟ್ಟ ಅರಣ್ಯ ಪ್ರದೇಶವನ್ನು ಹೊಂದಿದೆ. ಈ ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ಹಾಗೂ ಅರಣ್ಯ ನಿವಾಸಿಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸಲು ಸ್ಥಳಾಂತರದ ಅಗತ್ಯವಿದೆ.
ಅರಣ್ಯ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ತಾಂತ್ರಿಕ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಸ್ವ ಇಚ್ಚೆಯಿಂದ ಸ್ಥಳಾಂತರಕ್ಕೆ ಮುಂದಾಗುವ ಕುಟುಂಬಗಳನ್ನು ಮಾತ್ರ ನಿಯಮಾನುಸಾರ ಸ್ಥಳಾಂತರ ಮಾಡಲಾಗುತ್ತಿದೆ.
ಇತರೆ ಗ್ರಾಮಸ್ಥರು ಇಚ್ಛಿಸಿದಲ್ಲಿ ಅಂತಹ ಕುಟುಂಬಗಳ ಸ್ಥಳಾಂತರ ಮಾಡಲಾಗುವುದು ಎಂದು ಸಚಿವ ಖಂಡ್ರೆ ಅವರು ಭರವಸೆ ನೀಡಿದರು.
ಅರಣ್ಯ ರಕ್ಷಣೆಯಲ್ಲಿ ಅರಣ್ಯ ನಿವಾಸಿಗಳ ಕೊಡುಗೆ ದೊಡ್ಡದು. ಭೀಮಗಡ ಅರಣ್ಯ ಉಳಿಸಿ ಬೆಳೆಸಲು ಎಲ್ಲರೂ ಮುಂದಾಗೋಣ ಎಂದು ಕರೆ‌ ನೀಡಿದರು.
ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು,ತಳೇವಾಡಿ ಗ್ರಾಮದ 27 ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಲಾಗುತ್ತಿದೆ. ಅರಣ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅನೇಕ ವರ್ಷಗಳಿಂದ ಅರಣ್ಯದ ಮಧ್ಯೆ ಜನರು ನೆಲೆಸಿದ್ದಾರೆ.
ಅವರಿಗೆ ಮೂಲಸೌಕರ್ಯ ಒದಗಿಸುವುದರ ಜತೆಗೆ ಅರಣ್ಯ ರಕ್ಷಣೆ ದೃಷ್ಟಿಯಿಂದ ಸ್ಥಳಾಂತರ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಸ್ವ ಇಚ್ಛೆಯಿಂದ ಸ್ಥಳಾಂತರಗೊಳ್ಳುತ್ತಿರುವ ಕುಟುಂಬಗಳು ಹೆಚ್ಚಿನ ನೆರವಿನ ನಿರೀಕ್ಷೆ ಹೊಂದಿರುವುದರಿಂದ ಅರಣ್ಯ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಇನ್ನೂ ಹೆಚ್ಚಿನ ಸಹಾಯ ಒದಗಿಸಬೇಕು ಎಂದು ಅರಣ್ಯ ಸಚಿವರಿಗೆ ಮನವಿ ಮಾಡಿಕೊಂಡರು.
ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿರುವುದರಿಂದ ಭೀಮಗಡ ಅರಣ್ಯ ಪ್ರದೇಶಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶದ ವಿವಿಧ ಭಾಗಗಳ ಜನರು ಇಲ್ಲಿಗೆ ಭೇಟಿ ನೀಡುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇನ್ನೂ ಹತ್ತಾರು ಗ್ರಾಮಗಳ ಸ್ಥಳಾಂತರದ ಅಗತ್ಯವಿದೆ. ಗ್ರಾಮಸ್ಥರು ಸ್ವ ಇಚ್ಛೆಯಿಂದ ಮುಂದೆ ಬಂದರೆ ಅವರಿಗೂ ಕೂಡ ನಿಯಮಾನುಸಾರ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ವಿಠ್ಠಲ ಹಲಗೇಕರ ಅವರು,
ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಪರಿಹಾರದ ಹಣದ ಜತೆಗೆ ಕಂದಾಯ ಇಲಾಖೆಯಿಂದ ಒಂದು ಎಕರೆ ಜಾಗೆಯನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜಾಗೆ ನೀಡುವುದರಿಂದ ಎಲ್ಲ 27 ಕುಟುಂಬಗಳಿಗೆ ಒಂದು ಎಕರೆ ಜಾಗೆಯನ್ನು ಒದಗಿಸುವ ಮೂಲಕ ಆ ಕುಟುಂಬಗಳು ಒಂದೆಡೆ ನೆಲೆಸಿ ಹೊಸ ತಳೆವಾಡಿ ಗ್ರಾಮವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಪುನರ್ವಸತಿಗಾಗಿ ಕೂಡಲೇ ಜಾಗೆಯನ್ನು ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚವಾಣ ಅವರು ಮಾತನಾಡಿ, ಪಶ್ಚಿಮ ಘಟ್ಟದ ಜೀವವೈಧ್ಯತೆಯ ತಾಣವಾಗಿರುವ ಬೆಳಗಾವಿಯ ಪ್ರಾದೇಶಿಕ ವಿಭಾಗದ ವ್ಯಾಪ್ತಿಯ ಭೀಮಗಡದ 19,042 ಹೆಕ್ಟೆರ್ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳು ಮೂಲಸೌಕರ್ಯಗಳಿಂದ ವಂಚಿತರಾಗಿದ್ದು, ಅಂತಹ ಕುಟುಂಬಗಳ ಪೈಕಿ 27 ಕುಟುಂಬಗಳು ಸ್ವ ಇಚ್ಛೆಯಿಂದ ಸ್ಥಳಾಂತರಕ್ಕೆ ಮುಂದೆ ಬಂದಿರುವುದರಿಂದ ಸರಕಾರದಿಂದ ಅವರಿಗೆ ಅಗತ್ಯ ಅನುಕೂಲ ಕಲ್ಪಿಸಲಾಗುತ್ತಿದೆ.
ಇದೇ ರೀತಿಯಲ್ಲಿ ಸ್ಥಳಾಂತರಕ್ಕೆ ಮುಂದಾಗುವ ಕುಟುಂಬಗಳಿಗೂ ಸರಕಾರದಿಂದ ನಡರವು ನೀಡಲಾಗುವುದು ಎಂದರು.