ಬೆಳಗಾವಿ: ಬಸವಜಯಂತಿ ಅಂಗವಾಗಿ ಇದೇ ದಿ.27ರಂದು ಬೆಳಗ್ಗೆ 8. ಗಂಟೆಗೆ ಬಸವೇಶ್ವರ ವೃತ್ತದಿಂದ ಬೈಕ ರ್ಯಾಲಿ ಹಾಗೂ ಮೇ 4 ರಂದು ನಗರದಲ್ಲಿ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಈ ಕುರಿತು ಪತ್ರಕಾಗೋಷ್ಟಿಯಲ್ಲಿಂದು ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ರೊಟ್ಟಿ ಅವರು ವಿಷಯ ತಿಳಿಸಿ, ಬೈಕ್ ರ್ಯಾಲಿ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದ್ದು,ರ್ಯಾಲಿಯು ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ, ಖಾಸಭಾಗ್, ಶಾಹಪುರ, ವಡಗಾಂವ ಮಾರ್ಗವಾಗಿ ಸಾಗಿ ಅಲ್ಲಿಂದ ಶಿವಬಸವ ನಗರ, ಮಾಂತೇಶ್ ನಗರ, ಆಂಜನೇಯ ನಗರ, ಶ್ರೀನಗರ ಸೇರಿದಂತೆ ವಿವಿಧ ಬಡಾವಣೆಗಳ ಮೂಲಕ ಸಂಚರಿಸಿ, ಕೊನೆಗೆ ರಾಮತೀರ್ಥ ನಗರರದ ಲಿಂಗಾಯತ ಸಂಘಟನೆಯ ನಿವೇಶನದಲ್ಲಿ ರ‍್ಯಾಲಿ ಮುಕ್ತಾಯವಾಗಲಿದೆ. ಇದರಲ್ಲಿ ಸುಮಾರು 1,200 ಬೈಕ್ ಸವಾರರು ಈ
ರ್ಯಾಲಿಯಲ್ಲಿ ಪಾಲ್ಗೊಳಲಿದ್ದಾರೆ ಎಂದು ಅವರು ತಿಳಿಸಿದರು.
ವಿಶ್ವ ಗುರು ಬಸವೇಶ್ವರವರ ಜಯಂತಿ ಮಹೋತ್ಸವ ಅಂಗವಾಗಿ ಬೆಳಗಾವಿ ಮಹಾನಗರದ ಎಲ್ಲ ಬಸವಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷದ ಬಸವ ಜಯಂತಿಯನ್ನು ವಿಜೃಂಭಣೆ ಹಾಗೂ ವಿನೂತನವಾಗಿ ಆಚರಿಸಲು ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಮಹಾನಗರದಲ್ಲಿರುವ ಸುಮಾರು 15 ಬಸವಪರ ಸಂಘಟನೆಗಳು ಬಸವ ಜಯಂತಿ ಉತ್ಸವ ಸಮಿತಿಯಡಿ ಸೇರಿ ಜಯಂತಿ ಆಚರಿಸಲಿದ್ದೇವೆ. ಬಸವೇಶ್ವರ ವೃತ್ತದಲ್ಲಿ ಎಲ್ಲ ಸಂಘ ಸಂಸ್ಥೆಗಳ ಸದಸ್ಯರು,ಮುಖಂಡರು ಜನಪ್ರತಿನಿಧಿಗಳು ಹಾಗೂ ಮಠಾಧೀಶರ ಉಪಸ್ಥಿತಿಯಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಹಾಗೂ ಧ್ವಜಾರೋಹನ ನೆರವೇರಿಸುವ ಮೂಲಕ ಬಸವ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಮೇ.30ರಂದು ಎಲ್ಲ ಸಂಘಟನೆಗಳು ಸೇರಿ ತಮ್ಮ ಸಂಘ ಸಂಸ್ಥೆಗಳಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ
ಜಯಂತಿ ಆಚರಿಸಲಿದ್ದೇವೆ. ಹೀಗಾಗಿ ಎಲ್ಲ ಬಸವಾಭಿಮಾನಿಗಳು ತಮ್ಮ ಮನೆ, ಮನಗಳಲ್ಲಿ ಬಸವ ಜಯಂತಿ ಆಚರಿಸುವ ಮೂಲಕ ಬಸವಣ್ಣನವರ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಕರೆ ನೀಡಿದರು.
ಲಿಂಗಾಯತ ಸಂಘಟನೆ ಜಿಲ್ಲಾಧ್ಯಕ್ಷ ಈರಣ್ಣ ದೇಯಣ್ಣವರ ಮಾತನಾಡಿ, ಬಸವ ಜಯಂತಿ ಹಾಗೂ ವಿಶ್ವದ ಶಾಂತಿಗಾಗಿ ಬಸವಣ್ಣನವರ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು
ಮೇ. 4ರಂದು ಸಂಜೆ 4. ಗಂಟೆಗೆ ಬಸವಣ್ಣನವರ ಪ್ರತಿಮೆಯೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಮೆರವಣಿಗೆಯೂ ನಗರದ ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ, ಕಾಕತಿ ವೆಸ್ ರಸ್ತೆ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮದೇವ್ ಗಲ್ಲಿ, ಸಮಾದೇವಿ ಗಲ್ಲಿ ಮೂಲಕ ಸಾಗಿ ಲಿಂಗರಾಜ್ ಕಾಲೇಜ್ ನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಂಕರ್ ಗುಡಸ್, ಅಶೋಕ ಬೆಂಡಿಗೇರಿ, ನಗರ ಸೇವಕಾರದ ಶಂಕರ ಪಾಟೀಲ, ರಾಜಶೇಖರ ಡೋಣಿ, ಸೋಮಲಿಂಗ ಮಾವಿನಕಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.