ಬೆಳಗಾವಿ,: ಮೊದಲ ವರ್ಷದಿಂದ ಹೊಸ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಆಗಬೇಕು ಎಂದು ಪ್ರಯತ್ನಿಸುತ್ತಿದ್ದೇವೆ. ಮೂರು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಈಗ ಮೊದಲ ಹಂತದ ಕಾಮಗಾರಿ ಆರಂಭವಾಗಲಿದೆ. ಈಗಿರುವ ಕಚೇರಿಗಳನ್ನು ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ಮುಗಿಯಲು 2-3 ವರ್ಷ ಬೇಕು. ಇನ್ನು ಮೇಲ್ಸೇತುವೆಗೂ ಕನಿಷ್ಠ 2 ವರ್ಷ ಬೇಕು. ಮಳೆಗಾಲದ ಬಳಿಕ ಕೆಲಸ ಪ್ರಾರಂಭವಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗಳು ಒಂದೊಂದಾಗಿ ಮುಗಿಯುತ್ತಿವೆ ಎಂದು ವಿವರಿಸಿದರು.
ನಗರ ಕೇಂದ್ರ ಬಸ್ ನಿಲ್ದಾಣ ಒಂದು ತಿಂಗಳಲ್ಲಿ ಪೂರ್ಣವಾಗಲಿದ್ದು, ಜೂನ್ 1ರಂದು ಉದ್ಘಾಟಿಸಲಾಗುವದು. ಇನ್ನುಳಿದ ಕಾಮಗಾರಿಗಳು ಲೋಕಾರ್ಪಣೆಗೆ ಸಿದ್ಧವಾಗಿದ್ದು, ಅವುಗಳನ್ನು ಒಂದೊಂದಾಗಿ ಉದ್ಘಾಟಿಸಲಾಗುವುದು ಎಂದರು.
ಅನಧಿಕೃತ ಮನೆಗಳ ಕುರಿತು ನಿನ್ನೆ ಮುಖ್ಯಮಂತ್ರಿಗಳೇ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಮನೆ ಕಟ್ಟಿಸಿದ್ದರೆ ಸಾಕು ಅವರಿಗೆ ಮಹಾನಗರ ಪಾಲಿಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ರಿಂಗ್ ರೋಡ್ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ವಿಳಂಬವಾಗಿದೆ, ಆದರೆ, ಮಾಡಿಯೇ ಮಾಡುತ್ತಾರೆ. ಮಳೆಗಾಲ ನಂತರ ಆರಂಭವಾಗಲಿದೆ. ಇದರಲ್ಲಿ 57 ಎಕರೆ ಜಾಗದ ಸಮಸ್ಯೆ ಇದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಪ್ರೀಂಕೋರ್ಟಗೆ ಮನವಿ ಸಲ್ಲಿಸಿದ್ದಾರೆ‌. ಇದು ಬಿಟ್ಟರೆ ಇನ್ನುಳಿದಂತೆ ಎಲ್ಲವೂ ಸರಿ ಇದೆ ಎಂದು ಹೇಳಿದರು.
ಬೆಂಗಳೂರು ಮಾದರಿಯಲ್ಲಿ ಬೆಳಗಾವಿಯಲ್ಲಿ ಅಭಿವೃದ್ಧಿ‌ ವಿಚಾರಕ್ಕೆ ಬಹಳಷ್ಟು ಸಮಯ ಬೇಕಾಗುತ್ತದೆ. ಬೆಂಗಳೂರಿಗೆ 300 ವರ್ಷಗಳ ಇತಿಹಾಸವಿದೆ. ಆಗಿನಿಂದ ಅದು ಬೆಳೆಯುತ್ತಿದೆ. ಬೆಳಗಾವಿ ಅಭಿವೃದ್ಧಿ 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಶುರುವಾಗಿದೆ. ಇನ್ನು ಕನಿಷ್ಠ 10 ವರ್ಷ ಬೇಕಾಗುತ್ತದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಹೋದ ವರ್ಷ ಸಾಕಷ್ಟು ಮಳೆಯಾಗಿದೆ. ಬಹುತೇಕ ರಸ್ತೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ. ನಮಗೆ ಲಭ್ಯವಾದ ಅನುದಾನದಲ್ಲಿ ಕೆಲವು ಕಡೆ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಹುಲ್ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ವಿಚಾರಕ್ಕೆ ಅದರ ಬಗ್ಗೆ ಇನ್ನೂ ಚರ್ಚೆ ನಡೆದಿದೆ. ಎಲ್ಲ ಸೊಸೈಟಿಗಳ ಜೊತೆಗೆ ಸಭೆ ಮಾಡಿ ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗಾಗಲೇ ಯೂತ್ ಕಾಂಗ್ರೆಸ್ ಚುನಾವಣೆಯಿಂದ ರಾಹುಲ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಿದರು.