ಸರಕಾರಿ ಬಸಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಸಂಚರಿಸಲು ಕರ್ನಾಟಕ ಸರ್ಕಾರವು ಶಕ್ತಿ ಯೋಜನೆಯನ್ನು ಜಾರಿಗೆ ತರಲು ಆದೇಶ ಹೊರಡಿಸಿದ್ದು, ಅನೇಕ ಷರತ್ತುಗಳನ್ನು ವಿಧಿಸಲಾಗಿದೆ. ಈ ಸಂಬಂಧ ಸೋಮವಾರ ದಿ. ಜೂನ್ 5 ರಂದು ಆದೇಶ ಮಾರ್ಗಸೂಚಿಗಳನ್ನು ತಿಳಿಸಿದ್ದು, ಜೂನ್ 11ರಿಂದ ಜಾರಿಗೆ ಬರಲಿದೆ. ಬಸಿನಲ್ಲಿ ಪುರುಷ ಪ್ರಯಾಣಿಕರಿಗೆ ಶೇ. 50ರಷ್ಟು ಸೀಟುಗಳ ಮೀಸಲಾತಿಯನ್ನು ನೀಡಲಾಗಿದೆ.
ರಾಜ್ಯ ಸರಕಾರವು ಜಾರಿಗೆ ತರುತ್ತಿರುವ ಶಕ್ತಿ ಯೋಜನೆಯು ಪ್ರಗತಿಪರವಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಮಹಿಳೆಯರು ನಗರ, ಸಾಮಾನ್ಯ ಬಸಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸಲಾಗಿದೆ. ಆದರೆ ಎಕ್ಸ್‌ಪ್ರೆಸ್ ಸಾರಿಗೆ, ಎಸಿ ಮತ್ತು ಐಷಾರಾಮಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಿಲ್ಲ ಎಂದು ಸ್ಪಷ್ಟವಾಗಿ ವಿವರಿಸಲಾಗಿದೆ.
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ಯ ಬಸಗಳಲ್ಲಿ ಈ ಕಾರ್ಯಕ್ರಮವನ್ನು ನಿರ್ದಿಷ್ಟವಾಗಿ ರಾಜ್ಯದೊಳಗಿನ ಪ್ರಯಾಣಕ್ಕಾಗಿ ಮಾತ್ರವಿದ್ದು, ಅಂತರಾಜ್ಯ ಸಾರಿಗೆ ನಿಯಮಗಳಿಗೆ ಅನ್ವಯಿಸುವುದಿಲ್ಲ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ‘ಶಕ್ತಿ’ ಯೋಜನೆಯ ಮಾರ್ಗಸೂಚಿಗಳು
ಐಷಾರಾಮಿ ಬಸ್ಸುಗಳಾದ ರಾಜಹಂಸ, ಎಸಿ, ವಜ್ರ ವಾಯುವಜ್ರ ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಗ್ರೀನ್ ಕ್ಲಾಸ್, ಅಂಬಾರಿ ಉತ್ಸವ, ಎಫ್ಇ, ಬಸ್, ಮತ್ತು ಇವಿ ಪವರ್ ಪ್ಲಸ್ (ಎಸಿ ಬಸ್ಸುಗಳು) ಈ ಬಸಗಳಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ ಎಂಬುದನ್ನು ಗಮನಿಸಬೇಕು. ಇವು ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ಕೆಎಸ್ ಆರ್ ಟಿಸಿ, ಎನ್ ಡಬ್ಲುಕೆಆರ್ ಟಿಸಿ ಹಾಗೂ ಕಲ್ಯಾಣ ಕೆಆರ್ ಟಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ. 50ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿಡಲಾಗುತ್ತದೆ.
ಈ ಯೋಜನೆಯಡಿಯಲ್ಲಿ, ಸರ್ಕಾರವು ನಾಲ್ಕು ಸಾರಿಗೆ ಏಜೆನ್ಸಿಗಳಿಗೆ ಅವರ ಟಿಕೆಟ್/ಶಕ್ತಿ ಸ್ಮಾರ್ಟ್ ಕಾರ್ಡ್ ಡೇಟಾದ ಆಧಾರದ ಮೇಲೆ ಪಾವತಿಸಬೇಕಾದ ಮೊತ್ತವನ್ನು ಭರಿಸುತ್ತದೆ. ಮಹಿಳಾ ಪ್ರಯಾಣಿಕರು ಪ್ರಯಾಣಿಸುವ ನಿಜವಾದ ದೂರವನ್ನು ಆಧರಿಸಿ ರಸ್ತೆ ಸಾರಿಗೆ ನಿಗಮಕ್ಕೆ ಮರುಪಾವತಿ ಮಾಡಲಾಗುತ್ತದೆ.
ಮುಂದಿನ ಮೂರು ತಿಂಗಳೊಳಗೆ ಮಹಿಳೆಯರು ಸೇವಾ ಸಿಂಧು ಸರ್ಕಾರಿ ಪೋರ್ಟಲ್ ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವವರೆಗೆ, ಫಲಾನುಭವಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿದ ಗುರುತಿನ ಚೀಟಿಗಳನ್ನು ಬಳಸಬಹುದು.