ಬೆಳಗಾವಿ: ನಗರದ ಬಸವೇಶ್ವರ ವೃತ್ತದಲ್ಲಿರುವ (ಗೋವಾವೇಸ್) ಪೆಟ್ರೋಲ್ ಬಂಕ್ ಮತ್ತು ಅರ್ಬನ್ ಬ್ಯಾಂಕ್ ಸೇರಿದಂತೆ ಈಗಾಗಲೇ ಲೀಸ್ ಮುಗಿದ ಜಾಗೆಯ ಎಷ್ಟು ತೆರಿಗೆಯನ್ನು ಪಾಲಿಕೆಗೆ ಕಟ್ಟಬೇಕು ಎಂಬುದನ್ನು ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮೇಯರ್ ಸವಿತಾ ಕಾಂಬಳೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಂಗಳವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸದಸ್ಯ ರಮೇಶ ಸೊಂಟಕ್ಕಿ ಅವರು, ಗೋವಾವೆಸ್ ಪೆಟ್ರೋಲ್ ಬಂಕ್ ನವರು ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಪಾಲಿಕೆಯಿಂದ ಮಳಿಗೆ ನಿರ್ಮಾಣ ಮಾಡಿ ಪಾಲಿಕೆಯ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರ್ಬನ್ ಬ್ಯಾಂಕಿನವರು ಸಹ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಕಟ್ಟಬೇಕು. ಆದರೆ ಅವರ ಮೇಲೂ ಕ್ರಮ ಜರುಗಿಸಿಲ್ಲ. ಇಂಥವರಿಂದ ತೆರಿಗೆ ಸಂಗ್ರಹ ಮಾಡುವುದರಿಂದ ಪಾಲಿಕೆಗೆ ಇನ್ನಷ್ಟು ಆದಾಯ ಬರುತ್ತದೆ ಎಂದು ತಿಳಿಸಿದರು.
ಪೆಟ್ರೋಲ್ ಬಂಕ್ ಮತ್ತು ಅರ್ಬನ್ ಬ್ಯಾಂಕ್ ಗಳು ಪಾಲಿಗೆ ಎಷ್ಟು ಹಣ ಕೊಡಬೇಕು. ತಕ್ಷಣ ಹೊಸ ಟೆಂಡರ್ ಕರೆದು ಬೇರೆಯವರಿಗೆ ಕೊಡಿ ಎಂದು ಮನವಿ ಮಾಡಿದರು.
ಪಾಲಿಕೆ ಆಯುಕ್ತೆ ಶುಭ ಅವರು ಮಾತನಾಡಿ, ನಾವು ಮೊದಲು ಸ್ಥಳ ಪರಿಶೀಲನೆ ನಡೆಸಬೇಕು. ಹಳೆಯ ಮಾಲೀಕರು ಪಾಲಿಕೆಗೆ ಎಷ್ಟು ಹಣ ನೀಡಬೇಕು ಎಂದು ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.