ಬೆಳಗಾವಿ,: ಲೇವಾದೇವಿಗಾರ ಹಾಗೂ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ (47) ಅವರ ಸಾವು ಹೊಸ ತಿರುವು ಪಡೆದಿದ್ದು, ಸಂಚು ರೂಪಿಸಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಸಂಶಯವ್ಯಕ್ತಪಡಿಸಿದ್ದಾರೆ ಬುಧವಾರ ಶವ ಹೊರ ತೆಗೆದು ತನಿಖೆ ಆರಂಭಿಸಲಾಗಿದೆ. ಸಂತೋಷ ಪತ್ನಿ -ಹಾಗೂ ಇತರ ನಾಲ್ವರ ವಿರುದ್ಧ ಅವರ ಪುತ್ರಿ ಸಂಜನಾ ದೂರು ದಾಖಲಿಸಿದ್ದು,
‘ಸಂಜನಾ ಅವರ ತಾಯಿ ಉಮಾ , ಅವರ ಫೇಸ್ಬುಕ್ ಸ್ನೇಹಿತ, ಮಂಗಳೂರು ಮೂಲದ ಶೋಭಿತ್ ಗೌಡ ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಹಾಗೂ ಇನ್ನೊಬ್ಬ ಅಪರಿಚಿತ ಸೇರಿ ಕೊಲೆ ಮಾಡಿದ್ದಾರೆ’ ಎಂದು ದೂರು ದಾಖಲಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಇಲ್ಲಿನ ಆಂಜನೇಯ ನಗರದ ಮನೆಯಲ್ಲಿ ಸಂತೋಷ ಅವರು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರ ಜೊತೆ ವಾಸವಿದ್ದರು. ಅಕ್ಟೋಬರ್ 9ರಂದು ರಾತ್ರಿ ಏಕಾಏಕಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಉಮಾ ತಿಳಿಸಿದ್ದರು. ಇದನ್ನು ನಂಬಿದ ಕುಟುಂಬ ಸದಸ್ಯರು ಅಕ್ಟೋಬರ್ 10ರಂದು ಅಂತ್ಯಕ್ರಿಯೆ ನಡೆಸಿದ್ದರು.
ತಂದೆಯ ಕೊನೆಯ ಕ್ಷಣಗಳನ್ನು ನೋಡಬೇಕೆಂದು ಬಯಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸತೊಡಗಿದ ಪುತ್ರಿಯನ್ನು ಗದರಿಸಿದ ತಾಯಿ, ಸ್ನಾನ ಮಾಡಿಕೊಂಡು ಬಾ ನಂತರ ತೋರಿಸುತ್ತೇನೆ ಎಂದು ಕಳಿಸಿದ್ದರು.
ಸಂಜನಾ ಅತ್ತ ಹೋಗುತ್ತಿದ್ದಂತೆಯೇ ತಮ್ಮ ಇಬ್ಬರು ಪುತ್ರರನ್ನು ಕರೆದ ಅವರು ಕೊಲೆ ನಡೆದ ಸಮಯದ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿಸಿದ್ದರು. ಈ ವಿಷಯವನ್ನು ಇಬ್ಬರೂ ಬಾಲಕರು ತಮ್ಮ ಅಕ್ಕ ಸಂಜನಾಗೆ ತಿಳಿಸಿದರು.
ಆ ಕ್ಷಣದಿಂದಲೇ ಸಂಜನಾಗೆ ಅನುಮಾನ ಶುರುವಾಯಿತು. ತನ್ನ ತಂದೆ ಆರೋಗ್ಯ ವಾಗಿದ್ದರು. ಅವರದು ಸಹಜ ಸಾವಲ್ಲ; ಕೊಲೆ ಎಂದು ಅನುಮಾನಿಸಿ ಅ.15ರಂದು ಇಲ್ಲಿನ ಮಾಳಮಾರುತಿ ಪೋಲಿಸ್ ಠಾಣೆಗೆ ದೂರು ನೀಡಿದರು.
ಉಮಾ ತನ್ನ ಫೇಸ್ಬುಕ್ ಸ್ನೇಹಿತ ಶೋಬಿತ್ ಗೌಡ ಜತೆ ಸಲುಗೆ ಬೆಳೆಸಿಕೊಂಡಿದ್ದರು. ಈ ಸಂದೇಹದಿಂದ ಸಂತೋಷ ಜಗಳ ಶುರು ಮಾಡಿದ್ದರು. ಅವರ ಕಿರುಕುಳದಿಂದ ಉಮಾ ಕೊಲೆ ಸಂಚು ರೂಪಿಸಿದ್ದರು. ಅಕ್ಟೋಬರ್ 9ರಂದು ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರೆ ಹಾಕಿದ್ದರು.
ಸಂತೋಷ ನಿದ್ರೆಗೆ ಜಾರಿದ ನಂತರ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದೆಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸಂತೋಷ ಅವರ ಮನೆಯಲ್ಲಿ ಬೆಡ್ರೂಮ್ ಸೇರಿ 17 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಸಾವಿನ ದಿನದ ಬಹುತೇಕ ಫುಟೇಜ್ಗಳನ್ನು ಡಿಲಿಟ್ ಮಾಡಿದ್ದು, ಅನುಮಾನ ಹುಟ್ಟಿಸಿದೆ. ಎದುರು ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ, ಇಬ್ಬರು ಪುರುಷರು ತಡರಾತ್ರಿ ಮನೆಯಿಂದ ಹೊರ ಹೋಗಿದ್ದು ಕಂಡುಬಂದಿದೆ. ಅವರ ವಿಚಾರಣೆ ಮೂಲಕ ಪ್ರಕರಣ ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಸದಾಶಿವನಗರದಲ್ಲಿ ಹೂತಿದ್ದ ಸಂತೋಷ ಅವರ ಶವವನ್ನು ಹೊರತೆಗೆದ ಪೊಲೀಸರು, ಜಿಲ್ಲಾಸ್ಪ- ತ್ರೆಯ ಶವಾಗಾರಕ್ಕೆ ಸಾಗಿಸಿದರು. ಎಸಿ ಶ್ರವಣ್ಕುಮಾರ್ ಸಮ್ಮುಖದಲ್ಲಿ ಬೀಮ್ಸ್ ವೈದ್ಯರು, ಎಫ್ಎಸ್ಎಲ್, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ, ಪಾಲಿಕೆ ಸಿಬ್ಬಂದಿ, ಕಂದಾಯ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ.
ಗುತ್ತಿಗೆದಾರನ ಸಾವು : ಕೊಲೆ ಎಂದು ಮಗಳ ದೂರು
