ಬೆಳಗಾವಿ : ಪ್ರತಿ ಸಲದಂತೆ ಈ ಸಲವೂ ಕರಾಳ ದಿನಾಚರಣೆ ಆಚರಿಸಲು ಅನುಮತಿ ನೀಡುವಂತೆ ಕೋರಿದ್ದ
ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಜಿಲ್ಲಾಡಳಿತ ಖಡಕ್ ವಾರ್ನಿಂಗ್ ರವಾನಿಸಿದೆ. ಎಂಇಎಸ್ ವತಿಯಿಂದ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಕರಾಳ ದಿನ ಆಚರಿಸಲು ಅನುಮತಿ ನೀಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಆದರೆ, ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ಈ ವರ್ಷ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿಯಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಮಾಜಿ ಶಾಸಕ ಮನೋಹರ ಕಿಣೇಕರ ಅವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರನ್ನು ಭೇಟಿ ಮಾಡಿ ಕರಾಳ ದಿನದ ಮಾಹಿತಿಯನ್ನು ನೀಡಿ ಅನುಮತಿಗಾಗಿ ಮನವಿಯನ್ನು ಸಲ್ಲಿಸಿತು. ಈ ವೇಳೆ ಜಿಲ್ಲಾಧಿಕಾರಿಗಳು ಮತ್ತು ಎಂ.ಇ.ಎಸ್ ಪದಾಧಿಕಾರಿಗಳ ನಡುವೆ ದೀರ್ಘ ಚರ್ಚೆ ನಡೆಯಿತು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಕಾರಣಕ್ಕೆ ರಾಜ್ಯೋತ್ಸವ ಆಚರಣೆಗೆ ತೊಂದರೆಯಾಗದಂತೆ ಕರಾಳ ದಿನವನ್ನು ಆಚರಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಲಾಯಿತು. ಅದರೆ, ಜಿಲ್ಲಾಧಿಕಾರಿಗಳು ಎಂಇಎಸ್ ನಾಯಕರ ಮಾತಿಗೆ ಸೊಪ್ಪು ಹಾಕಲಿಲ್ಲ. ಇತ್ತೀಚೆಗೆ ಗಣೇಶೋತ್ಸವ ಸಂದರ್ಭದಲ್ಲಿ ಈದ್ ಮಿಲಾದ್ ಹಬ್ಬವಿತ್ತು. ಆದರೆ ಈದ್ ಮಿಲಾದ್ ಮೆರವಣಿಗೆಯನ್ನೇ ಮುಂದೂಡಲಾಗಿತ್ತು. ಅದೇ ರೀತಿ ನೀವು ಸಹಾ ಭಾಷಾ ಸಾಮರಸ್ಯ ಕಾಪಾಡುವ ದಿಸೆಯಲ್ಲಿ ಜಿಲ್ಲಾಡಳಿತ ನೀಡುವ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.