ಬೆಳಗಾವಿ: ಪ್ರಸಕ್ತ ವರ್ಷ ಎಸ್‌ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗೆ ಎಲ್ಲರೂ ಸಜ್ಜಾಗಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಮಕ್ಕಳ ಕಲಿಕಾ ಕ್ರಮ ಹಾಗೂ ಫಲಿತಾಂಶ ಸುಧಾರಣೆ ಜವಾಬ್ದಾರಿ ಹೊರಬೇಕು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸೂಚನೆ ನೀಡಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಬುಧವಾರ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಈಗಾಗಲೇ ಪ್ರತಿ ಶಾಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಿರುವುದು ಒಳ್ಳೆಯ ಬೆಳವಣಿಗೆ. ಇದನ್ನು ರಾಜ್ಯದಾದ್ಯಂತ ಜಾರಿಗೊಳಿಲಾಗುವುದು.
‘ಪ್ರತಿ ಶಾಲೆಯಲ್ಲಿ ಅತೀ ಹೆಚ್ಚು ಹಾಗೂ ಅತೀ ಕಡಿಮೆ ಅಂಕಗಳನ್ನು ಪಡೆಯುವ ವಿಧ್ಯಾರ್ಥಿಗಳು ಇದ್ದೇ ಇರುತ್ತಾರೆ. ಹಿಂದೆ ಬಿದ್ದ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿ ಜರುಗಿಸಿ ಅವರ ಫಲಿತಾಂಶ ಸುಧಾರಣೆಗೆ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
‘ಶಾಲೆಗಳಲ್ಲಿ ಕಲಿಕಾ ವಾತಾವರಣ ನಿರ್ಮಿಸಿ, ದಾಖಲಾತಿ ಹೆಚ್ಚಿಸಬೇಕು. ಸಮವಸ್ತ್ರ, ಪುಸ್ತಕ, ಶೂ, ಸಾಕ್ಸುಗಳನ್ನು ಕೂಡಲೇ ವಿತರಿಸಲು ಕ್ರಮವಹಿಸಬೇಕು’ ಎಂದು ಹೇಳಿದರು.
‘ಭಾರತದ ಸಂವಿಧಾನದ ಮಹತ್ವದ ಕುರಿತು ಮಕ್ಕಳಿಗೆ ತಿಳಿವಳಿಕೆ ಮೂಡಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಪ್ರತಿ ದಿನ ಶಾಲೆಗಳಲ್ಲಿ ಸಂವಿಧಾನ ಪಿಠೀಕೆ ಓದಿಸಬೇಕು. ‘ವಿವೇಕ ಶಾಲೆ’ ಯೋಜನೆ
ಯಡಿ ಮಂಜೂರಾದ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಬೇಕು. ಶಾಲಾ ಕೊಠಡಿಗಳ ದುರಸ್ತಿ, ಬಾಕಿ ಇರುವ ಶೌಚಾಲಯಗಳ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬವಾಗದಂತೆ ನಿಗಾವಹಿಸಬೇಕು’ ಎಂದರು.
ಶಾಲಾ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ರಾಕೇಶಕುಮಾರ ಸಿಂಗ್ ಮಾತನಾಡಿ, ‘ಶಾಲೆಗಳಲ್ಲಿನ ಮಕ್ಕಳ ಕಡ್ಢಾಯ ಹಾಜರಾತಿ ಕುರಿತು ಗಮನ ಹರಿಸಬೇಕು. ಹಾಜರಾತಿ ವಿಷಯದಲ್ಲಿ ಲೋಪಗಳು ಆಗದಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಕಾವೇರಿ, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೆಶಕಿ ಸಿಂಧು, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.
ಎಸ್‌ಎಸ್ಎಲ್‌ಸಿ ಫಲಿತಾಂಶ ಸುಧಾರಿಸಲಿ: ಸಚಿವ ಮಧು
