ಬೆಳಗಾವಿ : ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿಯವರು ಮುಖ್ಯಮಂತ್ರಿ ಆದರೆ ಸಂತೋಷ ಎಂದು ಬೆಳಗಾವಿ ಜಿಲ್ಲೆಯ ಮೂವರು ಶಾಸಕರು ಹೇಳಿರುವುದು ಈಗ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕ ಮುಖ್ಯಮಂತ್ರಿ ಆದರೆ ಸಂತಸ ಎಂದು ಪಕ್ಷಭೇದ ಮರೆತು ಬೆಂಬಲ ವ್ಯಕ್ತಪಡಿಸಿದ್ದಾರೆ.
ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಅವರು, ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸಂತೋಷ ಪಡುವುದಾಗಿ ಹೇಳಿದ್ದಾರೆ. ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯವರು. ಅದರಲ್ಲೂ ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಅವರು ಈ ಭಾಗದ ಸಮಸ್ಯೆಗಳಿಗೆ ಹೆಚ್ಚಾಗಿ ಸ್ಪಂದಿಸಲಿದ್ದಾರೆ. ಈ ನಿಟ್ಟಿನಲ್ಲಿ
ಅವರು ಬೆಳಗಾವಿ ಜಿಲ್ಲೆಯವರೇ ಆಗಿದ್ದು ಅವರಿಗೆ ಸ್ಥಳೀಯ ಸಮಸ್ಯೆಗಳ ಅರಿವಿದೆ. ಹಿಂದುಳಿದಿರುವ ಖಾನಾಪುರ ತಾಲೂಕಿನ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದಾರೆ. ಅವರು ಹಾಗೂ ನನ್ನ ಜೊತೆ ಉತ್ತಮ ಸಂಬಂಧ ಇದ್ದು ಒಂದು ವೇಳೆ ಅವರು ಮುಖ್ಯಮಂತ್ರಿ ಆದರೆ ಸಂತೋಷ. ಮೊದಲಿನಿಂದಲೂ ಅವರ ಜೊತೆ ನನಗೆ ಉತ್ತಮ ಒಡನಾಟವಿದೆ. ಒಂದು ವೇಳೆ ಅವರು ಕಾಂಗ್ರೆಸ್ ಪಕ್ಷದ 136 ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿ ಹುದ್ದೆಗೆ ಏರಿದರೆ ಬೆಳಗಾವಿ ಜಿಲ್ಲೆಯವರೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ. ಅದು ಈ ಭಾಗದ ಜನತೆಗೆ ಸಂತಸ ಕ್ಷಣವಾಗಲಿದೆ ಎಂದು ಅವರು ವಿಶ್ಲೇಷಿಸಿದರು.
ಎರಡು ದಿನಗಳ ಹಿಂದಷ್ಟೇ ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು ಸಹಾ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆದರೆ ಸಂತೋಷ ಎಂದು ಪ್ರತಿಕ್ರಿಯೆ ನೀಡಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದರೆ ಸಂತೋಷವಾಗುತ್ತದೆ. ವೈಯಕ್ತಿಕವಾಗಿ ಅದನ್ನು ನಾನು ಸ್ವಾಗತಿಸುವುದಾಗಿ ಅವರು ಹೇಳಿದ್ದರು.
ಈ ನಡುವೆ ಸತೀಶ ಜಾರಕಿಹೊಳಿ ಅವರ ಜೊತೆ ಮೊದಲಿನಿಂದಲೂ ಅತ್ಯಂತ ನಿಕಟ ಸ್ನೇಹ ಸಂಬಂಧ ಹೊಂದಿರುವ ಸವದತ್ತಿಯ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರು ತಮ್ಮ ನಾಯಕನ ಪರ ಬಲವಾಗಿ ಬ್ಯಾಟ್ ಬೀಸಿದ್ದಾರೆ.
ರಾಜ್ಯದ ಪ್ರಭಾವಿ ಸಚಿವರಲ್ಲಿ ಒಬ್ಬರಾಗಿರುವ ಸತೀಶ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುವ ಶಕ್ತಿಯಿದೆ. ಸತೀಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಆ ಸ್ಥಾನವನ್ನು ನಿಭಾಯಿಸುವಷ್ಟು ಅವರು ಶಕ್ತಿಯುತವಾಗಿದ್ದಾರೆ. ಸಮಗ್ರ ಉತ್ತರ ಕರ್ನಾಟಕವನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲಿದ್ದಾರೆ. ಅವರಲ್ಲಿ ಅಂತಹ ದೊಡ್ಡ ಶಕ್ತಿ ಇದೆ. ಬೆಳಗಾವಿ ಜಿಲ್ಲೆಯವರೇ ಆಗಿರುವ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆದರೆ ಸಂತೋಷ ಪಡುವುದಾಗಿ ಅವರು ಹೇಳಿದ್ದಾರೆ.
ಸತೀಶ ಜಾರಕಿಹೊಳಿ ಸಿಎಂ ಮಾಡಲು ಬಿಜೆಪಿ ಶಾಸಕರು ಬೆಂಬಲ
