ಬೆಂಗಳೂರು : ಸಂಕಷ್ಟದ ಕಾಲದಲ್ಲಿ ಪಕ್ಷವನ್ನು ಮುನ್ನಡೆಸಿದ್ದೇನೆ. ಈಗ ಹಿರಿಯರು, ಕಿರಿಯರು ಎಲ್ಲರೂ ನನಗೆ ಸಹಕಾರ ಕೊಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಿನೇಶ್ ಗುಂಡೂರಾವ್‌ ಅವರ ಸ್ವಯಂಪ್ರೇರಿತ ರಾಜೀನಾಮೆ ಬಳಿಕ ಸೋನಿಯಾ ಗಾಂಧಿಯವರು ನನಗೆ ಅಧಿಕಾರ ನೀಡಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಉಪ ಚುನಾವಣೆ ಮುಗಿದ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ನಿದ್ದೆ ಇಲ್ಲದೆ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇನೆ. ಶ್ರಮ ಹಾಕಿ ದುಡಿದಿದ್ದೇನೆ. ಈಗ ಬೇರೆ ಯಾವ ಸಂದರ್ಭವೂ ಉದ್ಭವವವಾಗುವುದಿಲ್ಲ. ಎಲ್ಲರೂ ನನಗೆ ಸಹಕಾರ ಕೊಟ್ಟು, ಆಶೀರ್ವಾದ ಮಾಡುತ್ತಾರೆ. ಒಂದು ಉತ್ತಮವಾದ ಕಾಂಗ್ರೆಸ್‌ ಸರ್ಕಾರ ನೀಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯ ಅಧಿಕಾರ ಹಂಚಿಕೆಯ ಚರ್ಚೆ ನಡೆದಿಲ್ಲ ಎಂದರು.
ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಒಂದು ತಿಂಗಳ ಹಿಂದೆ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರಕುತ್ತದೆ ಎಂದು ಹೇಳಲಾಗಿತ್ತು. ನಂತರ 20 ಸ್ಥಾನ ಕಡಿಮೆ ತೋರಿಸಿದರು. ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಖಚಿತವಾಗಿ 141 ಸ್ಥಾನಗಳನ್ನು ಗಳಿಸಲಿದೆ ಎಂದರು.
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಸಿಂಗಪುರ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ನನಗಿಂತ ಒಂದು ವರ್ಷ ಹಿರಿಯರು. ಅವರು ಆರೋಗ್ಯ ಸುಧಾರಣೆಗೆ ಹೋಗಿರಬಹುದು. ಅವರ ಲೆಕ್ಕಾಚಾರ ನಮಗೆ ಏಕೆ ಎಂದರು ರೆಸಾರ್ಟ್ ರಾಜಕಾರಣ 25 ವರ್ಷಗಳ ಹಿಂದೆಯೇ ಮುಗಿದಿದೆ. ಎಷ್ಟೇ ಸ್ಥಾನ ಬಂದರೂ ಸರ್ಕಾರ ರಚಿಸುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಅದು ಅವರ ಭ್ರಮೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.