ವಾಷಿಂಗ್ಟನ :ತಾಯಿಯ ಗರ್ಭದಲ್ಲಿರುವ ಶಿಶುವಿನ ಮಿದುಳಿನಲ್ಲಿ ಕಂಡು ಬಂದ ಅಪರೂಪದ ನರಗಳ ಗಾಲೆನ್‌ ಮಾಲಫಾರ್ಮೇಶನ್‌ ಖಾಯಿಲೆಗೆ  ಶಸ್ತ್ರಚಿಕಿತ್ಸೆಯನ್ನುನೆರವೇರಿಸುವಲ್ಲಿ ಅಮೆರಿಕದ ತಜ್ಞವೈದ್ಯರು ಯಶಸ್ವಿಯಾಗಿದ್ದು, ಹೆಣ್ಣು ಶಿಶುವಿನ ಪ್ರಾಣವನ್ನು ಉಳಿಸಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆ ನಡೆದಿರುವದು ವಿಶ್ವದಲ್ಲಿಯೇ ಪ್ರಥಮ.

ಶಿಶುವಿನ ಮೆದುಳಿನ ರಕ್ತನಾಳವು ಅಸಹಜ ಬೆಳವಣಿಗೆಯಿಂದ ಬಳಲುತ್ತಿರುವದು ತಪಾಸಣೆಗೊಳ್ಪಡಿಸಿದಾಗ ಕಂಡು ಬಂದಿತ್ತು. ಮಿದುಳಿನಲ್ಲಿ ರಕ್ತನಾಳಗಳಲ್ಲಿ ಉಂಟಾಗುವ ಇದನ್ನು ‘ವೆನಸ್ ಆಫ್ ಗಾಲೆನ್ ಮಾಲ್‌ ಫಾರ್ಮೇಶನ್” ಎನ್ನುತ್ತಾರೆ. ಅಮೇರಿಕದ ಬಿಗ್ ಹ್ಯಾಮ್ ಮತ್ತು ಮಹಿಳಾ ಆಸ್ಪತ್ರೆ ಹಾಗೂ ಬಾಸ್ಟನ್ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 34 ವಾರದ ಗರ್ಭಿಣಿ ಮಹಿಳೆಯಲ್ಲಿರುವ ಶಿಶುವಿಗೆ ಈ ಸಮಸ್ಯೆ ಕಂಡು ಬಂದಿತ್ತು. ತಡಮಾಡದ ವೈದ್ಯರು ಈ ಅಪರೂಪದ ಹಾಗೂ ಅತ್ಯಂತ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಹಸುಗೂಸಿನ ಪ್ರಾಣವನ್ನು ಉಳಿಸಿದ್ದಾರೆ.

ಮಿದುಳಿನಿಂದ ಹೃದಯಕ್ಕೆ ರಕ್ತವನ್ನು ಸಾಗಿಸುವ ನಾಳವು ಸರಿಯಾಗಿ ಬೆಳವಣಿಗೆ ಆಗದಿದ್ದರೆ ಈ ಸಮಸ್ಯೆ ಉಂಟಾಗುತ್ತದೆ. ನಾಳದಲ್ಲಿ ರಕ್ತ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿ ನಾಳ ಹಾಗೂ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆಯಿರುತ್ತದೆ. ಮಿದುಳಿಗೆ ಭಾರಿ ಹಾನಿ ಮತ್ತು ತಕ್ಷಣವೇ ಹೃದಯ ವೈಫಲ್ಯ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇಂಥ ಸಮಸ್ಯೆಯಿರುವ ಶಿಶುಗಳು ಜನಿಸಿದ ನಂತರವಷ್ಟೇ ಸಾಮಾನ್ಯವಾಗಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಅದು ತೀರಾ ವಿಳಂಬವಾಗಿ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ಇಂಥ ಸಮಸ್ಯೆಯಿರುವ ಶೇ. 50ರಿಂದ 60ರಷ್ಟು ಮಕ್ಕಳು ಬೇಗನೇ ರೋಗಗ್ರಸ್ತರಾಗುತ್ತಾರೆ. ಶೇ. 40ರಷ್ಟು ಶಿಶುಗಳು ಮರಣಿಸುತ್ತವೆ. 11 ವರ್ಷಕ್ಕೆ ಮೊದಲು ಸಾವನ್ನಪ್ಪುವ ಸಾಧ್ಯತೆ ಶೇ.30ರಷ್ಟಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ. 60 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಈ ಖಾಯಿಲೆ ಕಂಡುಬರುತ್ತದೆ. ಈ ಶಸ್ತ್ರಚಿಕಿತ್ಸೆ ಬಳಿಕ ಮಿದುಳು ಅಥವಾ ಹೃದಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಮಗು ಜನಿಸುತ್ತದೆ ಎಂದು ಡಾ. ಒರ್ಬಾಚ್ ಹೇಳಿದ್ದಾರೆ.