ಬೆಳಗಾವಿ : ಬೆಳಗಾವಿ ಮಹಾನಗರವನ್ನು ಸ್ಮಾರ್ಟ್ ಸಿಟಿ-2.0 ಕ್ಕೆ ಆಯ್ಕೆಯಾಗಿದ್ದು, ನಗರದ ಘನತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆಗೆ 135 ಕೋ. ರೂ.ಗಳು ಲಭಿಸಲಿದೆ. ದೇಶದ 18 ನಗರಗಳು 2.0ಕ್ಕೆ ಆಯ್ಕೆಯಾಗಿದ್ದು, ರಾಜ್ಯದಿಂದ ಬೆಳಗಾವಿ ನಗರಕ್ಕೆ ಮಾತ್ರ ಸ್ಥಾನ ಲಭಿಸಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಬೆಳಗಾವಿಗೆ ಆಗಮಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಯೀಮ್ ಕಿರುವಾಲಾ ಅವರ ನೇತೃತ್ವದ ತಂಡವು ಬೆಳಗಾವಿಯ ಸ್ಮಾರ್ಟ ಸಿಟಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಮಾಹಿತಿ ಪಡೆದು, ಗುರುವಾರ ವಿವಿಧ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.
*ಯೋಜನೆಗಳ ಬಗ್ಗೆ ಮಾಹಿತಿ:* ಅಶೋಕನಗರದ ಮಾರುಕಟ್ಟೆಯಲ್ಲಿರುವ ಅಗರಬತ್ತಿ ತಯಾರಿಕಾ ಘಟಕ, ಖಾಸಬಾಗ ಶಿಕ್ಷಕರ ಕಾಲೋನಿಯಲ್ಲಿ ತ್ಯಾಜ್ಯ ವಿಲೆವಾರಿ ಘಟಕಕ್ಕೆ ಭೇಟಿ ನೀಡಿ, ಕಸವನ್ನು 5 ವಿಭಾಗಗಳಾಗಿ ವಿಂಗಡಿಸುವದು, ಅಜಮನಗರದ ಇಂದಿರಾ ಕ್ಯಾಂಟೀನನ ಅಡುಗೆ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರ ತಂಡ ತುರಮುರಿ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಬಯೋಗ್ಯಾಸ್ ಯೋಜನೆ, ಪರಿಶೀಲಿಸಿ, ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ಅದನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಮಾಹಿತಿ ಕಲೆ ಹಾಕಿದೆ.
ನಿರ್ದೇಶಕ ನಯೀಮ್ ಕಿರುವಾಳ ಮಾತನಾಡಿ, ಸ್ಮಾರ್ಟ್ ಸಿಟಿ-2.0 ರಲ್ಲಿ ಸೇರ್ಪಡೆಗೊಂಡ ನಂತರ ಯೋಜನೆಯನ್ನು ಕಾರ್ಯಗತಗೊಳಿಸಲಾಗುವದು. ದೆಹಲಿಯಿಂದ ಬಂದಿದ್ದ ಕೇಂದ್ರ ತಂಡ ಗುರುವಾರ ದಿನವಿಡೀ ವಿವಿಧೆಡೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ ಎಂದು ಹೇಳಿದರು. ಎರಡನೇ ಹಂತದ ಯೋಜನೆಯಲ್ಲಿ ವಿಶೇಷವಾಗಿ ನಗರ ಸ್ವಚ್ಛತೆಗೆ ಆದ್ಯತೆ ನೀಡಲಿದ್ದು, ಪರಿಸರ ಹಾಳಾಗದಂತೆ ಹೆಚ್ಚಿನ ಕಾಳಜಿ ವಹಿಸಲು ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ತಂಡ ಹೇಳಿದೆ. ಅಲ್ಲದೆ ಕೆಲವು ಸುಧಾರಣೆಗಳನ್ನು ಮಾಡಲು ಸಹ ಸಲಹೆ ನೀಡಿದೆ.
ಹೊಸ ಯೋಜನೆಗಳನ್ನು ಜಾರಿಗೊಳಿಸುವುದು ಮುಖ್ಯ. ಸದ್ಯ ಕೆಲವೆಡೆ ಯೋಜನೆಗಳು ಜಾರಿಯಾಗುತ್ತಿದ್ದರೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಯೋಜನೆಗಳಿಗೆ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಮಹಾನಗರ ಪಾಲಿಕೆಯಿಂದ ಅನುಷ್ಠಾನಗೊಂಡಿರುವ ವಿವಿಧ ಯೋಜನೆಗಳನ್ನು ಕೇಂದ್ರ ತಂಡ ಪರಿಶೀಲಿಸಿ, ಕೆಲವು ತಿದ್ದುಪಡಿಗಳನ್ನು ಮಾಡಲು ಸೂಚಿಸಿತು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸ್ಮಾರ್ಟ ಸಿಟಿ ಎಂಡಿ ಸಯ್ಯದಾ ಅಫ್ರೀನಬಾನು ಬಳ್ಳಾರಿ, ಅಭಿಯಂತರ ಹನುಮಂತ ಕಲಾದಗಿ, ಇಂಜಿನಿಯರ್ ಆದಿತ್ ಖಾನ್ ಪಠಾಣ, ಕಾರ್ಪೊರೇಟರ್ ಹನುಮಂತ ಕೊಂಗಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸ್ಮಾರ್ಟ್ ಸಿಟಿ-2.0: ಕೇಂದ್ರ ತಂಡ ಭೇಟಿ, ನಗರದ ಘನತ್ಯಾಜ್ಯ ನಿರ್ವಹಣೆಗೆ 135 ಕೋ. ರೂ.
