ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ವಿವಿಧ ಶಾಖೆಗಳ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದರು. ಸಾರ್ವಜನಿಕರ ಕೆಲಸ– ಕಾರ್ಯಗಳು ವಿಳಂಬವಾಗುತ್ತಿವೆ, ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.
ಬೆಳಿಗ್ಗೆ ಪಾಲಿಕೆಯ ಬಾಗಿಲು ತೆರೆಯುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿತು. ಪಾಲಿಕೆಯ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಇನ್ನೂ ಬಂದಿರಲಿಲ್ಲ. ಅಷ್ಟೊತ್ತಿಗೆ ತಂಡ ಪರಿಶೀಲನೆ ನಡೆಸಿತು. ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದಲ್ಲಿ 10 ಸಿಬ್ಬಂದಿ ದಾಳಿಯಲ್ಲಿದ್ದರು.
ಮಹಾನಗರ ಪಾಲಿಕೆಗೆ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರು ತಾಸುಗಟ್ಟಲೇ ಕಾದರೂ ಕೆಲಸಗಳು ಆಗುತ್ತಿಲ್ಲ. ಒಂದು ಕೆಲಸಕ್ಕಾಗಿ ವಾರಗಟ್ಟಲೇ ದಿನವೂ ಅಲೆಯಬೇಕಿದೆ. ಜನ ಕಚೇರಿಯಲ್ಲಿ ಕಾಯುತ್ತಿದ್ದರೂ ಅಧಿಕಾರಿಗಳು ಕಚೇರಿಗೆ ಬರಲಿಲ್ಲ. ಇದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಖುದ್ದು ಹೋದರು. ನಂತರ ಒಬ್ಬೊಬ್ಬರೇ ಅಧಿಕಾರಿಗಳು ಕಚೇರಿಗೆ ‍ಪ್ರವೇಶ ಮಾಡುತ್ತಿದ್ದಂತೆಯೇ ತರಾಟೆಗೆ ತೆಗೆದು
ಕೊಂಡರು. ಅವರ ಕೆಲಸ ಏನು? ಸಮಯ ಎಷ್ಟು? ಎಷ್ಟು ಕೆಲಸ ಬಾಕಿ ಉಳಿದಿವೆ, ಏಕೆ ಬಾಕಿ ಉಳಿಸಲಾಗಿದೆ ಎಂದೆಲ್ಲ ಕಾರಣಗಳನ್ನು ಕೇಳಿದರು.
ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲು ಸಾಕಷ್ಟು ವಿಳಂಬ ಮಾಡಲಾಗುತ್ತಿದೆ. ಅನಗತ್ಯ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅದಕ್ಕೆ ರಶೀದಿ ಕೂಡ ನೀಡುವುದಿಲ್ಲ ಎಂದು ಕೆಲ ಸಾರ್ವಜನಿಕರು ದೂರಿದರು. ಲೋಕಾಯುಕ್ತರು ಸ್ಥಳಕ್ಕೆ ದಾಳಿ ಮಾಡಿದಾಗ ಇಂಥ ಅಂಶಗಳನ್ನು ಕಂಡು ಸಿಡಿಮಿಡಿಗೊಂಡರು.
ಪ್ರಮಾಣ ಪತ್ರಗಳಿಗೆ ಸರ್ಕಾರ ನಿಗದಿ ಮಾಡಿದ ಶುಲ್ಕಕ್ಕಿಂತ ಹೆಚ್ಚು ಹಣ ಏಕೆ ವಸೂಲಿ ಮಾಡಲಾಗುತ್ತಿದೆ ಎಂದು ಕೆಲ ಅಧಿಕಾರಿ, ಸಿಬ್ಬಂದಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ತಡವರಿಸಿದ ಪಾಲಿಕೆ ಸಿಬ್ಬಂದಿ ‘ಚಿಲ್ಲರೆ ಸಮಸ್ಯೆಯ ಕಾರಣ ಹೀಗೆ ಹೆಚ್ಚು ಹಣ ಉಳಿಯುತ್ತಿದೆ’ ಎಂದು ಸಬೂಬು ಹೇಳಿ ಜಾರಿಕೊಳ್ಳಲು ಯತ್ನಿಸಿದರು.
ಚಿಲ್ಲರೆ ಸಮಸ್ಯೆಯಾಗಿದ್ದರೆ ಆನ್‌ಲೈನ್‌ ಪೇಮೆಂಟ್ ವ್ಯವಸ್ಥೆ ಏಕೆ ಮಾಡಿ
ಕೊಂಡಿಲ್ಲ? ‍ಫೋನ್‌ ಪೆ, ಗೂಗಲ್‌ ಪೆ ರೀತಿ ಪರ್ಯಾಯ ಮಾರ್ಗಗಳನ್ನು ಏಕೆ ಅನುಸರಿಸಿಲ್ಲ? ಉದ್ದೇಶಪೂರ್ವಕ ಹಣ ಉಳಿಸಿಕೊಳ್ಳುತ್ತಿದ್ದೀರಾ? ಎಂದೂ ಲೋಕಾಯುಕ್ತ ಎಸ್ಪಿ ಹಣಮಂತರಾಯ ಕಿಡಿ ಕಾರಿದರು.
ಕಚೇರಿಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ದರಪಟ್ಟಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವಂತೆ ಸೂಚಿಸಿದರು.‌‌ ಪರಿಸರ, ಆರೋಗ್ಯ, ಶಿಕ್ಷಣ, ಎಂಜಿನಿಯರಿಂಗ್ ‌ವಿಭಾಗ ಸೇರಿದಂತೆ ತೆರಿಗೆ ಪಾವತಿ ಕೇಂದ್ರಕ್ಕೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.

‘ತೆರಿಗೆ ವಂಚನೆ, ಭೂ ಮಾಫಿಯಾ ಸೇರಿ ನಾಲ್ಕೈದು ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಶಿಫಾರು ಮಾಡಿದ್ದೇವೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಇಲ್ಲಿನ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸೂಕ್ತ ತನಿಖೆ ನಡೆಸದಿದ್ದರೆ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಲೋಕಾಯುಕ್ತ ದಾಳಿಯ ಬಳಿಕ ಏನೇನು ವಿಚಾರಣೆ ಆಗಿದೆ ಎಂದು ಮಾಹಿತಿ ಪಡೆದ ನಂತರ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಪ್ರತಿಕ್ರಿಯೆ ನೀಡಿದರು.