ಬೆಳಗಾವಿ: ನಗರಕ್ಕೆ ಹೊಂದಿಕೊಂಡಿರುವ ಬಸವಣ ಕುಡಚಿ ಕ್ಯಾಂಪಸ್‌ನಲ್ಲಿ ಭರತೇಶ ಎಜ್ಯುಕೇಷನ್‌ ಟ್ರಸ್ಟ್‌(ಬಿಇಟಿ) ವತಿಯಿಂದ ಭರತೇಶ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಬಿಐಟಿ) ಆರಂಭಿಸಲಾಗುತ್ತಿದೆ. ರಾಜ್ಯ ಸರ್ಕಾರದ ವೇಳಾಪಟ್ಟಿಯಂತೆ ಇದೇ ಶೈಕ್ಷಣಿಕ ವರ್ಷ ಕಾರ್ಯಾರಂಭ ಮಾಡಲಿರುವ ಬಿಐಟಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಅನುಮೋದನೆ ದೊರೆತಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿದೆ’ ಎಂದು ಬಿಇಟಿ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರಿಂದಿಲ್ಲಿ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘1962ರಲ್ಲಿ ಸ್ಥಾಪನೆಯಾದ ಬಿಇಟಿ 19 ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿದೆ. 8 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 600 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೈಗೆಟುಕುವ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಾವು ಮುಂದಿದ್ದೇವೆ. ಬಿಐಟಿ ಕೂಡ ಇದೇ ಮಾರ್ಗದಲ್ಲಿ ಸಾಗಲಿದೆ’ ಎಂದು ತಿಳಿಸಿದರು.
‘ಬಿಐಟಿಯಲ್ಲಿ ಪರಿಚಯಿಸಿರುವ ಬಿ.ಇ ಕೋರ್ಸ್‌ನ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ 120, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಆ್ಯಂಡ್‌ ಮಷಿನ್‌ ಲರ್ನಿಂಗ್‌ನಲ್ಲಿ 60, ಇನ್‌ಫಾರ್ಮೇಷನ್‌ ಸೈನ್ಸ್‌ನಲ್ಲಿ 60 ಹಾಗೂ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ನಲ್ಲಿ 120 ಸೀಟು ಲಭ್ಯವಿವೆ. ಈಗ ನಾಲ್ಕು ಕೋರ್ಸ್‌ ಆರಂಭಿಸಿದ್ದೇವೆ. ಬೇಡಿಕೆ ಆಧರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕೋರ್ಸ್‌ ಆರಂಭಿಸಲು ಯೋಜಿಸಿದ್ದೇವೆ’ ಎಂದು ಹೇಳಿದರು.
‘ಬಿಐಟಿ ಸ್ಥಾಪಿಸಬೇಕು ಎಂಬುದು ಬಿಇಟಿ ಸಂಸ್ಥಾಪಕ ಕೋಮಲಣ್ಣ ದೊಡ್ಡನವರ ಮತ್ತು ರಾಜೀವ್ ದೊಡ್ಡನವರ ಅವರ 40 ವರ್ಷಗಳ ಹಿಂದಿನ ಕನಸಾಗಿತ್ತು. ಇಂದು ಅದು ಸಾಕಾರವಾಗಿದೆ’ ಎಂದು ತಿಳಿಸಿದರು.
‘ವೃತ್ತಿಪರ ಕೊರ್ಸ್‌ಗಳ ಪ್ರವೇಶಕ್ಕಾಗಿ ಈ ಬಾರಿ ನಡೆದಿರುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಟ್ಯೂಷನ್‌ ಶುಲ್ಕದಲ್ಲಿ ಶೇ.100ರಷ್ಟು ರಿಯಾಯಿತಿ ನೀಡಲಾಗುವುದು. ಸಿಇಟಿ ಮತ್ತು ಮ್ಯಾನೇಜ್‌ಮೆಂಟ್ ಸೀಟುಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು’ ಎಂದರು.
ಬಿಇಟಿ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪುರೆ, ಖಜಾಂಚಿ ಭೂಷಣ ಮಿರ್ಜಿ, ಸದಸ್ಯರಾದ ಹಿರಾಚಂದ ಕಲಮನಿ, ದೇವೇಂದ್ರ ದೇಸಾಯಿ, ಸಾವಿತ್ರಿ ದೊಡ್ಡಣ್ಣವರ, ಪ್ರಾಚಾರ್ಯೆ ವೀಣಾ ಕರಾಚಿ ಇತರರಿದ್ದರು.