ಬೆಳಗಾವಿ: ‘ವಿಶ್ವಗುರು ಬಸವಣ್ಣನವರು ಮಾನವೀಯತೆಯನ್ನು ಸಾರಿ ಸಮಾನತೆಯ ಹರಿಕಾರರು. ಅವರ ಸಂದೇಶ ಇಂದಿಗೂ ಲೋಕಮಾನ್ಯವೆನಿಸಿದೆ. ಪ್ರಸ್ತುತ ಯುದ್ಧ ಹಾಗೂ ಜಾತಿಗಳ ಸಂಘರ್ಷದಲ್ಲಿ ಬದುಕುತ್ತಿರುವ ನಮಗೆ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆನಿಸಿದೆ’ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.
ಅವರು ಬೆಳಗಾವಿ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಬೆಳಗಾವಿ ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭೆ ಜಿಲ್ಲಾ ಘಟಕ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
‘ಇಂದು ನಾವೆಲ್ಲ ಒಳಪಂಗಡಗಳನ್ನು ಮಾಡಿಕೊಂಡು ಹೋರಾಡುತ್ತಿದ್ದೇವೆ ಅದನ್ನು ಬದಿಗೆ ಇಟ್ಟು ಸಾಂಘಿಕವಾಗಿ ಸಮಾಜವನ್ನು ಕಟ್ಟಬೇಕಾಗಿದೆ. ಅಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಪ್ರಗತಿಗಾಗಿ ಹೋರಾಡಿದರು. ಎಂಟುನೂರು ವರ್ಷಗಳಾದರೂ ಅವರ ವಿಚಾರಗಳು ಲೋಕ ಪೂಜ್ಯವೆನಿಸಿವೆಕೊಂಡಿವೆ. ಇಂದು ದೇಶ ವಿದೇಶದಲ್ಲಿ ಬಸವಣ್ಣನವರ ವಚನಗಳು ಕುರಿತು ಅಧ್ಯಯನಗಳು ನಡೆಯುತ್ತಿವೆ. ಅವರು ಕನ್ನಡ ನಾಡಿನಲ್ಲಿ ಅವತರಿಸಿರುವುದು ನಮ್ಮ ಸೌಭಾಗ್ಯ ನಾಡಿನುದ್ದಗಲಕ್ಕೂ ನಮ್ಮ ಯುವಜನರು ಅವರ ಸಂದೇಶಗಳನ್ನು ಅರಿಯುವಂತಾಗಬೇಕು. ಬಸವ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು. ಬೈಕ್ ರ‍್ಯಾಲಿ ಬಸವ ಜಾಗೃತಿಯನ್ನುಂಟು ಮಾಡಲೆಂದು’ ಡಾ.ಕೋರೆಯವರು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ‘ಬಸವಣ್ಣನವರ ಮಾನವೀಯತೆ ವಿಚಾರಗಳನ್ನು ಅಳವಡಿಸಿಕೊಳ್ಳುವ ಕೆಲಸ ಮೊದಲು ನಡೆಯಬೇಕಾಗಿದೆ. ನೈತಿಕ ಬದುಕು ನಮ್ಮದಾದರೆ ಸಮಾಜ ಸುಧಾರಣೆ ಸಾಧ್ಯ. ನಡೆನುಡಿ ಒಂದಾಗಿ ಜೀವನವನ್ನು ರೂಪಿಸಿಕೊಳ್ಳುವ ಮಹತ್ತರ ಕಾರ್ಯ ಎಲ್ಲರಿಂದ ನಡೆಯಬೇಕಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಹಿರಿಯ ನ್ಯಾಯವಾದಿ ಎಂ.ಬಿ.ಜೀರಲಿ, ಡಾ.ಎಚ್.ಬಿ.ರಾಜಶೇಖರ, ಡಾ.ಎಸ್.ಎಮ್.ದೊಡ್ಡಮನಿ, ರಾಜು ಹತ್ತರಕಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ ಪಾಟೀಲ, ಉಪಾಧ್ಯಕ್ಷರಾದ ಸುಜೀತ ಮುಳಗುಂದ, ಪ್ರಸಾದ ಹಿರೇಮಠ, ರಾಜು ಟೋಪಣ್ಣನವರ, ಬಾಲಚಂದ್ರ ಬಾಗಿ, ವೀಣಾ ನಾಗಮೋತಿ, ರಕ್ಷಾ ದೇಗಿನಾಳ, ವೀರೇಶ ಅಪ್ಪಯ್ಯನವರಮಠ ಮುಂತಾದವರು ಉಪಸ್ಥಿತರಿದ್ದರು. ರ‍್ಯಾಲಿಯು ಶಿವಬಸವ ನಗರದ ಲಿಂಗಾಯತ ಭವನದಿಂದ ಪ್ರಾರಂಭವಾದ ರ್ಯಾಲಿಯು ನಾಗನೂರು ರುದ್ರಾಕ್ಷಿ ಮಠ, ಶ್ರೀಕೃಷ್ಣ ದೇವರಾಯ ವೃತ್ತ, ಚನ್ನಮ್ಮ ವೃತ್ತ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಸಂಭಾಜಿ ವೃತ್ತ, ಟಿಳಕಚೌಕ, ಕಪಿಲೇಶ್ವರ ಮೇಲ್ಸೇತುವೆ, ಶಿವಾಜಿ ಉದ್ಯಾನ, ಶಹಾಪೂರ ಮೂಲಕ ಬಸವೇಶ್ವರ ಸರ್ಕಲ್ (ಖಾಸಬಾಗ) ನಾಥಪೈ ಸರ್ಕಲ್, ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದಿಕ ಕಾಲೇಜ ಮಾರ್ಗವಾಗಿ ಬಸವೇಶ್ವರ ವೃತ್ತ(ಗೋವಾ ವೇಸ್) ತಲುಪಿತು.