ಬೆಳಗಾವಿ,: 108 ವರ್ಷಗಳ ಇತಿಹಾಸ ಹೊಂದಿರುವ ಕೆಎಲ್‍ಇ ಸಂಸ್ಥೆಯು ದಾನಿಗಳಿಂದ ಮಹಾದಾನಿಗಳಿಂದ ಬೆಳೆದುನಿಂತಿದೆ. ಕೆಎಲ್‍ಇ ಸಂಸ್ಥೆಯ ಯಾವುದೇ ಇತಿಹಾಸವನ್ನು ಅರಿಯದೆ ಬಾಲಿಶವಾದ ಹೇಳಿಕೆಗಳನ್ನು ಕೊಡುವುದು ಉಚಿತವಾದುದಲ್ಲವೆಂದು ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಮಾತಿಗೆ ಪ್ರತ್ಯುತ್ತರ ನೀಡಿ ಚಾಟಿ ಬೀಸಿದ್ದಾರೆ.
ನಿನ್ನೆ ಕೆಎಲ್‍ಇ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ ಪರ ಪ್ರಚಾರ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ ‘ಕಾಂಗ್ರೆಸ್ ಸರ್ಕಾರ ಕೇವಲ ಒಂದು ರೂ.ಗೆ ಜಮೀನು ನೀಡಿದ ಫಲವೇ ಕೆಎಲ್‍ಇ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯ ಬೆಳೆದಿದೆ’ ಎಂದು ತಪ್ಪು ಮಾಹಿತಿಯನ್ನು ನೀಡಿದ್ದಕ್ಕಾಗಿ ಡಾ.ಪ್ರಭಾಕರ ಕೋರೆಯವರು ಅದನ್ನು ತೀವ್ರವಾಗಿ ಖಂಡಿಸಿದ್ದಾರೆ.
‘ದಾನಿಗಳಿಂದ, ಮಹಾದಾನಿಗಳಿಂದ, ಸಿರಸಂಗಿ ಲಿಂಗರಾಜರು, ರಾಜಾಲಖಮಗೌಡರು, ಭೂಮರಡ್ಡಿ ಬಸಪ್ಪನವರಂಥ ತ್ಯಾಗವೀರರಿಂದ ಕೆಎಲ್‍ಇ ವಿಸ್ತಾರದಿಂ ವಿಸ್ತಾರಕ್ಕೆ ಬೆಳೆದುನಿಂತಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಶ್ನೆ ಉದ್ಭವಿಸಬಾರದು. ಕೆಎಲ್‍ಇ ಸಂಸ್ಥೆ ಸ್ವಂತದ ಹಣದಲ್ಲಿ ಪ್ರಾರ್ಪಟಿ ಖರೀದಿಸಿದೆ. ಆಯಾ ಕಾಲಘಟ್ಟದಲ್ಲಿದ್ದ ಪಕ್ಷಗಳಿಂದ ಸಹಾಯ ಸಹಕಾರ ಪಡೆದಿದೆ. ಆದರೆ ಕೇವಲ ಕಾಂಗ್ರೆಸ್‍ನಿಂದ ಕೆಎಲ್‍ಇ ತನ್ನ ಆಸ್ಪತ್ರೆ ನಿರ್ಮಿಸಿದೆ, ವಿ.ವಿ.ಗಳನ್ನು ಸ್ಥಾಪಿಸಿದೆ ಎಂಬರ್ಥದ ಹೇಳಿಕೆಗಳು ಇಂದಿನ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ದುರದೃಷ್ಟಕರ. ಕೆಎಲ್‍ಇ ಬೆಳವಣಿಗೆಯ ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ “ಕಾಂಗ್ರೆಸ್”ನಿಂದ ಕೆಎಲ್‍ಇ ಬೆಳೆದಿದೆ ಎಂದು ಹೇಳಿರುವದನ್ನು ನಾನು ಪ್ರತಿಭಟಿಸುತ್ತೇನೆ. ನಮ್ಮ ಕೆಎಲ್‍ಇ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದವರು, ಬೆಂಬಲಿಸುವವರು ಇದ್ದಾರೆ. ಅದರರ್ಥ ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿಲ್ಲ. ವೈಯಕ್ತಿಕವಾಗಿ ಅವರ ನಿಲುವುಗಳನ್ನು ನೋಡಬೇಕು. ಶಿಕ್ಷಣ ಸಂಸ್ಥೆಯಲ್ಲಿ ನಾವು ರಾಜಕೀಯ ತರುವುದಿಲ್ಲ. ಅದರ ಬೆಳವಣಿಗೆಗಾಗಿ ಸರ್ವರ ಸಹಕಾರ ಪಡೆಯುತ್ತೇವೆ.
‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಈ ನೆಲದ ಶಿಕ್ಷಣ ಸಂಸ್ಥೆಗಳ ನೈಜ ಇತಿಹಾಸವನ್ನು ಅರಿತುಕೊಂಡಂತೆ ಕಾಣುವುದಿಲ್ಲ. ಇತಿಹಾಸ ಅರಿಯದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡುವುದು ಸಮಂಜಸವೆನಿಸುವುದಿಲ್ಲ. ಕೆಎಲ್‍ಇ ಸಂಸ್ಥೆಯ ಇತಿಹಾಸವನ್ನು ತಿಳಿದುಕೊಳ್ಳದೆ ಮತಬೇಟೆಗಾಗಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರ ಭಾವನೆಗಳೊಂದಿಗೆ ಆಟವಾಡುವುದು ಕಾಂಗ್ರೆಸ್‍ಗೆ ತರವಲ್ಲ. ಲಕ್ಷ್ಮೀ ಹೆಬ್ಬಾಳ್ಕರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಕೋರಬೇಕೆಂದು ಡಾ.ಪ್ರಭಾಕರ ಕೋರೆಯವರು ಆಗ್ರಹಿಸಿದ್ದಾರೆ.
ದಾನಿಗಳಿಂದ ಕೆಎಲ್‍ಇ ಸಂಸ್ಥೆ ಬೆಳೆದಿದೆ, ಕಾಂಗ್ರೆಸ್‍ನಿಂದ ಅಲ್ಲ !: ಡಾ.ಪ್ರಭಾಕರ ಕೋರೆ ಚಾಟಿ
