ಬೈಲಹೊಂಗಲ : ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಆರೋಪಿಸಿ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೈಲಹೊಂಗಲ ನಗರದಲ್ಲಿ ನಡೆದಿದೆ. ಇದರಿಂದ ಗಲಿಬಿಲಿಗೊಂಡ ಸಿಬ್ಬಂದಿಗಳು ರಕ್ಷಣೆ ನೀಡುವಂತೆ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತು, ಬಸ್ ಸಂಚಾರ ಸ್ಥಗಿತಗೊಳಿಸಿದರು.
ಧಾರವಾಡದಿಂದ ಬೈಲಹೊಂಗಕ್ಕೆ ಆಗಮಿಸಿದ್ದ ಅನ್ಯ ಕೋಮಿನ ಯುವಕರು ಮರಳಿ ಧಾರವಾಡಕ್ಕೆ ಹೊರಟಿದ್ದರು. ಆಗ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಸಿಬ್ಬಂದಿಯ ಸಹಾಯಕ್ಕೆ ಆಗಮಿಸಿದ ಇತರ ಸಿಬ್ಬಂದಿಗಳ ಮೇಲೂ ಯುವಕ ಹಲ್ಲೆ ನಡೆಸಿರುವದು ವಿಡಿಯೋದಲ್ಲಿ ದಾಖಲಾಗಿದೆ. ಇದರಿಂದ ವೃತ್ತಿ ಸುರಕ್ಷತೆ ನೀಡಿ ಎಂದು ನೌಕರರು ಧರಣಿ ಕುಳಿತರು.
ಡಿಟಿಒಗೇ ಘೇರಾವ್: ಪೊಲೀಸ್ ಠಾಣೆಗೆ ಬಂದಿದ್ದ ಬೆಳಗಾವಿ ಡಿಟಿಒ ಕೆ.ಕೆ.ಲಮಾಣಿ ಅವರಿಗೆ ಸಾರಿಗೆ ಘಟಕದ ಸಿಬ್ಬಂದಿ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆದರೆ ಕ್ರಮ ಕೈಕೊಳ್ಳುವುದನ್ನು ಬಿಟ್ಟು ಸಮಜಾಯಿಸಿ ನೀಡಿ ಕೆಲಸ ಮಾಡಿ ಅಂತ ಸಾಕು ಎಂದು ಹೇಳಿ ಕಳುಹಿಸುತ್ತಿದ್ದಂತೆ ನೌಕರರು ಅಸಮಾಧಾನಗೊಂಡರು. ನಿಮ್ಮ ಮೇಲೆ ಹಲ್ಲೆ ಮಾಡಿದರೆ ಏನು ಆಗುತ್ತಿತ್ತು. ಮೊದಲು ಸಾರಿಗೆ ನೌಕರರ ಹಿತ ಕಾಪಾಡಿ. ಅದನ್ನು ಬಿಟ್ಟು ಗುಂಡಾಗಿರಿ ಮಾಡಿದರವರೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಕರಣ ದಾಖಲು ಮಾಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಘಟಕದ ಸಿಬ್ಬಂದಿ ಎಚ್ವರಿಸಿದರು.
ವಿಷಯ ತಿಳಿದು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ, ವಿಶ್ವಹಿಂದು ಪರಿಷದ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಬಿಜೆಪಿ ಮುಖಂಡರು ಠಾಣೆಗೆ ಭೇಟಿ ನೀಡಿ ಪ್ರತಿಭಟನಾನಿರತ ನೋವು ಆಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಧ್ವನಿ ಎತ್ತಿದರು.