ಬೆಳಗಾವಿ :ಮೂರು ದಶಕಗಳ ಬೇಡಿಕೆ ಹಾಗೂ ಕನಸು ಕೊನೆಗೂ ಈಡೇರಲಿಲ್ಲ. ಅಭಿವೃದ್ದಿ ಹಾಗೂ ಜನರ ಅನುಕೂಲಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆಯನ್ನು ಘೋಷಿಸುತ್ತಾರೆ ಎಂಬ ಭರವಸೆ ಹುಸಿಯಾಗಿದೆ.
ಪ್ರಸಕ್ತ ಸಾಲಿನ ಬಜೆಟನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕೋಡಿಯನ್ನು ಕೊನೆಗೂ ಹೊಸ ಜಿಲ್ಲೆ ರಚನೆಯ ಘೋಷಣೆ ಮಾಡಲೇ ಇಲ್ಲ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಾದ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆಗಳ ಘೋಷಣೆ ಮಾಡುತ್ತಾರೆ ಎಂಬ ಆಶಾಭಾವ ಮೂಡಿತ್ತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಗೋಕಾಕ, ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ ಜಿಲ್ಲೆಗಳ ರಚನೆ ಮಾಡುತ್ತಾರೆ ಎಂಬ ಬಗ್ಗೆ ಭಾರಿ ಚರ್ಚೆ ಹರಡಿತ್ತು.
ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಸಿದ್ದರಾಮಯ್ಯ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಹೊಸ ಜಿಲ್ಲೆಗಳ ರಚನೆಯ ಘೋಷಣೆ ಮಾಡದೇ ಇರುವ ರಹಸ್ಯ ಮಾತ್ರ ನಿಗೂಢವಾಗಿದೆ. ಇಲ್ಲಿನ ಜನತೆ ಹಾಗೂ ಸಂಘಟನೆಗಳು ಇನ್ನೆಷ್ಟು ಕಾಲ ಕಾಯಬೇಕು, ಹೋರಾಟ ಮಾಡಬೇಕು ಎಂಬುದು ಆಯಾ ಭಾಗದ ಜನರ ಅಭಿಪ್ರಾಯವಾಗಿದೆ.