ಬೆಳಗಾವಿ, ಫೆ.5: ಸರ್ಕಾರದ ಐದು ಗ್ಯಾರಂಟಿಗಳ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರಕಾರ ಕ್ರಮ ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ಹೊಸ ಆಸ್ಪತ್ರೆ, ಶಾಲೆಗಳು ಮತ್ತು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದರು.

ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಅನೇಕ ಕಷ್ಟಗಳ ನಡುವೆಯೂ ಪ್ರತಿವರ್ಷ 60 ಸಾವಿರ ಕೋಟಿ ರೂಪಾಯಿಗಳನ್ನು ಬಡವರ ಕಲ್ಯಾಣಕ್ಕೆ ಸರಕಾರ ಖರ್ಚು ಮಾಡುತ್ತಿದೆ. ಗ್ಯಾರಂಟಿ ಯೋಜನೆ ಮೂಲಕ ಉಳಿತಾಯವಾಗುವ ಹಣವನ್ನು ಫಲಾನುಭವಿಗಳು ತಮ್ಮ ಮಕ್ಕಳ ಶಿಕ್ಷಣ ಸೇರಿದಂತೆ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆರೆ ತುಂಬುವ ಯೋಜನೆ ಅನುಷ್ಠಾನ, ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಹೊಸ ಆಸ್ಪತ್ರೆ, ಶಾಲೆಗಳು ಮತ್ತು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಡವರ ಮಕ್ಕಳಿಗೆ ಧ್ವಜ ನೀಡುವವರ ಮಕ್ಕಳು ವಿದೇಶಗಳಲ್ಲಿ ಉನ್ನತ‌ ವ್ಯಾಸಾಂಗ ಮಾಡುತ್ತಾರೆ. ಆದ್ದರಿಂದ ಇಂತಹ ಹುನ್ನಾರಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಅವರು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ರಾಜ್ಯ ದಿವಾಳಿ ಆಗಲಿದೆ ಎಂದು ಟೀಕಿಸಿದವರೇ ಇಂದು ಪಂಚ ಗ್ಯಾರಂಟಿ ಯೋಜನೆಯ ಫಲವನ್ನು ಅನುಭವಿಸುತ್ತಿರುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮನೆಯ‌ ಯಜಮಾನಿಯರ‌ ಆರ್ಥಿಕ ಸಬಲೀಕರಣಕ್ಕೆ ಸರಕಾರ ಮುಂದಾಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 212 ಕೋಟಿ ರೂಪಾಯಿ ನೀಡುತ್ತಿರುವುದು ಕಡಿಮೆಯಲ್ಲ. ಚುನಾವಣೆ ವೇಳೆ ನೀಡಿದ ವಚನವನ್ನು ಪಾಲಿಸುವ ಮೂಲಕ ಬಡವರ ಪರ ಇರುವುದನ್ನು ಸಾಬೀತುಪಡಿಸಿದ್ದೇವೆ. ಮುಂಬರುವ ದಿನಗಳಲ್ಲೂ ಸರಕಾರದ ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಳ ಮಾಡಲು ಸರಕಾರ ಬದ್ಧವಿದೆ ಅವರು ಹೇಳಿದರು.

ಪ್ರಥಮ ಸ್ಥಾನ: ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ -2 ಪ್ರಕಾಶ ಹುಕ್ಕೇರಿ ಮಾತನಾಡಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದೆ. ಅದರ ಕುರಿತು ಜನ ಸಾಮಾನ್ಯರಿಂದ ಯಾವುದೇ ಒಂದು ದೂರು ಕೂಡ ಬಂದಿಲ್ಲ. ಯೋಜನಾ ಅನುಷ್ಠಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಶಾಸಕ ಆಸಿಫ್(ರಾಜು) ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿದರು. ವಿದ್ಯಾ ತಾ̧ನ್ಸೆ ಗೀತಾ ಚಿಕ್ಕಲದಿನ್ನಿ ಅವರು ಗ್ಯಾರಂಟಿ ಯೋಜನೆಗಳ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  

ಅನ್ನಭಾಗ್ಯ ಯೋಜನೆಯ ಡಿಬಿಟಿ ಪೋಸ್ಟರ್ ಗಳನ್ನು ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರು ಬಿಡುಗಡೆಗೊಳಿಸಿದರು. ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಜಿ.ಪಂ. ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ನಗಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.