ಬೆಳಗಾವಿ : ತೀವ್ರ ಹೃದ್ರೋಗದಿಂದ ಬಳುತ್ತಿದ್ದ ಮಹಿಳೆಯೋರ್ವಳು ಗರ್ಭ ಧರಿಸಿ 7 ತಿಂಗಳಾಗಿತ್ತು. ಹೃದಯ ಚಿಕಿತ್ಸಾ ಪ್ರಕ್ರಿಯೆ ಮಾಡಿದರೆ ವಿಕಿರಣದ ಸಮಸ್ಯೆಯಾಗಿ ಮಗುವಿನ ಮೇಲೆ ಅಘಾಧವಾದ ಪರಿಣಾಮ ಬೀರುತ್ತದೆ. ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಗರ್ಭವತಿ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿ ಅವಳನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ನಗರದ ಹರಿಹಂತ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಎಂ ಡಿ ದಿಕ್ಷಿತ ಅವರ ತಂಡವು ಯಶಸ್ವಿಯಾಗಿದೆ. ಗರ್ಭಿಣಿ ಮಹಿಳೆಗೆ ತೆರದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು ವಿಶ್ವದಲ್ಲಿಯೇ ಪ್ರಥಮವಾಗಿರಬಹುದು.
ಬೆಳಗಾವಿ ನಗರದ 37 ವರ್ಷದ ಅನಿತಾ ಎಂಬುವವರು ಗರ್ಭವತಿಯಾದ ನಂತರ ತೀವ್ರತರವಾದ ಕೊಲೆಸ್ಟ್ರಾಲನೊಂದಿಗೆ ಬಳುತ್ತಿದ್ದಳು. ಆದರೆ ಮಹಿಳೆಗೆ ವಿಕಿರಣದ ಸಮಸ್ಯೆಯಾಗುತ್ತದೆ ಎಂದು ತಿಳಿದು ಯಾವುದೇ ರೀತಿಯ ಚಿಕಿತ್ಸೆಯನ್ನು ನೆರವೇರಿಸುವದು ಅತ್ಯಂತ ಕಠಿಣ ಪರಿಸ್ಥಿತಿಯಾಗಿತ್ತು. ಹೃದಯದ ಎಡಬಾಗದ ಕೊಲೆಸ್ಟ್ರಾಲ ಭರಿತ ಮೂರು ರಕ್ತನಾಳಗಳು ದಪ್ಪವಿದ್ದ ಕಾರಣ ಹೃದಯ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿತ್ತು. ಆದರೂ ಎರಡೂ ಜೀವ ಉಳಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿ ಎಂದು ಮನಗಂಡ ಡಾ. ಎಂ ಡಿ ದಿಕ್ಷಿತ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿದರು. ಅದೂ ಯಾವುದೇ ಎಕ್ಸರೇ ಅಥವಾ ವಿಕಿರಣ ಸೂಸುವ ಸಾಧನಗಳ ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ.
ಪರಿಸ್ಥಿತಿಯ ಸೂಕ್ಷ್ಮತೆ ಹಾಗೂ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡ ಶಸ್ತ್ರಚಿಕಿತ್ಸಕರ ತಂಡವು ಎಲ್ಲ ಪರ್ಯಾಯ ಮಾರ್ಗಗಳ ಮೂಲಕ ಶಸ್ತ್ರಚಿಕಿತ್ಸೆಗೆ ಅಣಿಯಾಯಿತು. LIMA-RIMA ‘Y’ ತಂತ್ರ ಉಪಯೋಗಿಸಿ ಅಪಧಮನಿಯ ರಿವಾಸ್ಕುಲರೈಸೇಶನ್ ಮಾಡಲು ನಿರ್ಧರಿಸಿತು. ಡಾ.ಎಂ.ಡಿ.ದೀಕ್ಷಿತ್, ಡಾ.ಅಮೃತ್ ನೇರ್ಲಿಕರ್, ಡಾ.ಅಭಿಷೇಕ್ ಜೋಶಿ, ಡಾ.ನಿಖಿಲ್ ದೀಕ್ಷಿತ್, ಡಾ.ಪ್ರಶಾಂತ್ ಎಂ.ಬಿ., ಡಾ.ಅವಿನಾಶ್ ಲೋಂಧೆ ಮತ್ತು ಡಾ.ಸೌಭಾಗ್ಯ ಭಟ್ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡವು ತಾಯಿ ಹಾಗೂ ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ತೊಂದರೆಯಾಗದಂತೆ ತೀವ್ರ ನಿಗಾ ಘಟಕದಲ್ಲಿ ಅತ್ಯಂತ ಎಚ್ಚರಿಕೆಯಿಂದ ನಂತರದ ಚಿಕಿತ್ಸೆಯನ್ನು ಮಾಡಲಾಯಿತು. ಇದರಿಂದ ಗರ್ಭವತಿ ಮಹಿಳೆಯು ಕೇವಲ ಒಂದು ವಾರದಲ್ಲಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.
ಶಸ್ತ್ರಚಿಕಿತ್ಸಕ ತಂಡದ ಸಮರ್ಪಣಾ ಮನೋಭಾವನೆ, ನುರಿತ ಹಾಗೂ ಸಹಕಾರ, ಸಮನ್ವಯತೆಯಿಂದ ಮಾತ್ರ ಇಂತ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು. ಯಶಸ್ವಿ ಫಲಿತಾಂಶವು ವೈದ್ಯವಿಜ್ಞಾನದಲ್ಲಿನ ಆವಿಷ್ಕಾರ ಹಾಗೂ ಉನ್ನತೀಕರಣ ಪ್ರಗತಿಯನ್ನು ತಿಳಿಸುತ್ತದೆ. ಅಲ್ಲದೇ ರೋಗಿಗಳ ಯೋಗಕ್ಷೇಮಕ್ಕೆ ಸಾಧ್ಯವಿರುವ ಸಾಧ್ಯತೆಗಳನ್ನು ಆರೋಗ್ಯ ವೃತ್ತಿಪರರ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳುತ್ತಾರೆ ಡಾ. ಎಂ ಡಿ ದಿಕ್ಷಿತ.
ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿ ತಾಯಿ ಮತ್ತು ಮಗುವಿನ ಜೀವ ಉಳಿಸಿದ ತಜ್ಞವೈದ್ಯರ ತಂಡವನ್ನು ಸಂಸ್ಥೆಯ ಅಧ್ಯಕ್ಷರಾದ ರಾವಸಾಹೇಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ಅಭಿನಂದಿಸಿದ್ದಾರೆ.
7 ತಿಂಗಳ ಗರ್ಭಿಣಿ ಮಹಿಳೆಗೆ ಅಪರೂಪದ ತೆರೆದ ಹೃದಯ ಶಸ್ತ್ರಚಿಕಿತ್ಸೆ
