ಬೆಳಗಾವಿ,:ಸುಶ್ರುತನು ನಾಲ್ಕನೆ ಶತಮಾನದಲ್ಲಿ ಅಪಸ್ಮಾರದ ರೋಗವನ್ನು ಅಪಸ್ಮಾರ ಬಹುಘೋರಂ ಎಂದು ವರ್ಣಿಸಿದ್ದಾನೆ. ಜನಸಾಮಾನ್ಯರು ಅಪಸ್ಮಾರವನ್ನು ಮೂರ್ಛೆರೋಗ, ಫಿಟ್ಸ್, ಜಟ್ಕಾ ಎಂದು ಕರೆಯುತ್ತಾರೆ. ಶೇ. 2ರಷ್ಟು ಜನರಿಗೆ ಜೀವನದಲ್ಲಿ ಯಾವಾಗಲಾದರೂ ಒಮ್ಮೆ ಫಿಟ್ಸ್ ಬರುವ ಸಾಧ್ಯತೆಗಳಿರುತ್ತವೆ. ಮಗುವಾಗಿದ್ದಾಗ ಅಥವಾ ೬೫ ವರ್ಷದ ನಂತರವೂ ಅಪಸ್ಮಾರ ಕಂಡು ಬರುತ್ತದೆ. ಅದು ಯಾವ ವಯಸ್ಸಿನಲ್ಲಾದರೂ ಬಂದೆರಗಬಹುದು. ಶೇ. 75-80 ರಷ್ಟು ಈ ರೋಗದ ಚಿಕಿತ್ಸೆಯನ್ನು ಪಡೆಯಲು ಹಿಂದೇಟು ಹಾಕುತ್ತಾರೆ. ಅವೈಜ್ಞಾನಿಕ ಉಪಾಯಗಳಿಗೆ ಮೊರೆ ಹೋಗುವುದನ್ನು ಕಾಣುತ್ತೇವೆ.
ಮೆದುಳಿನೊಳಗಿನ ನರಕೋಶಗಳಲ್ಲಿ ಅಸಹಜ ಮತ್ತು ಅತಿಯಾದ ವಿದ್ಯುತ್ ಕ್ರಿಯೆಗಳು ಉತ್ಪತ್ತಿಯಾಗುವುದರಿಂದ ಫಿಟ್ಸ್ ರೋಗವು ಉಂಟಾಗುತ್ತದೆ. ಈ ರೀತಿಯ ವಿದ್ಯುತ್‌ಚಕ್ತಿಯಿಂದ ಉತ್ಪಾದನೆಯ ಮೆದುಳಿನ ಒಂದು ಭಾಗದಲ್ಲಿ ಮಾತ್ರ ಉತ್ಪತ್ತಿಯಾದಲ್ಲಿ ರೋಗಿಗೆ ಪಾರ್ಶ್ವರೀತಿಯ ಫಿಟ್ಸ್ ಬರುತ್ತದೆ. ಆದರೆ ಈ ರೀತಿಯ ಅಸಹಜ ವಿದ್ಯುತ್‌ಚ್ಛಕ್ತಿ ಒಂದೆಡೆಯಿದ ಇನ್ನೊಂದೆಡೆ ಮತ್ತು ಸಂಪೂರ್ಣ ಮೆದುಳನ್ನು ಅವರಿವರಲ್ಲಿ ಸಂಪೂರ್ಣ ರೀತಿಯ ಅಥವಾ ದೇಹದ ಎಲ್ಲಾ ಭಾಗಗಳಲ್ಲಿ ಕಂಪನ (ಜನರಲೈಸ್ಡ್ ಫಿಟ್ಸ್) ಉಂಟಾಗುತ್ತದೆ. ಈ ರೀತಿಯ ಜನರಲೈಸ್ಡ್ ಫಿಟ್ಸ್ ಬಂದಾಗ ಮನುಷ್ಯನಿಗೆ ಎಲ್ಲಾ ಕೈಕಾಲುಗಳು ಪ್ರಜ್ಞಾಹೀನ ಸಹ ಆಗುತ್ತದೆ.
ಫಿಟ್ಸ್ ರೋಗದ ಲಕ್ಷಣಗಳು ಮೆದುಳಿನಲ್ಲಿ ವಿದ್ಯುತ್‌ಚ್ಛಕ್ತಿ ಉತ್ಪಾದನೆ ಆಗುವ ಸ್ಥಳಗಳ ಮೇಲೆ ಅವಲಂಬಿತವಾಗುತ್ತದೆ.
ರೋಗ ಪತ್ತೆ
ರಕ್ತಪರೀಕ್ಷೆಗಳಲ್ಲದೆ ಹಲವು ವಿಶಿಷ್ಟ ತಪಾಸಣಾ ವಿಧಾನಗಳಿಂದ ಮೆದುಳು ಮತ್ತು ನರರೋಗಗಳನ್ನು ಪತ್ತೆ ಹಚ್ಚಲು ಸಾಧ್ಯವಿರುತ್ತದೆ. ಮೆದುಳು ಮತ್ತು ಬೆನ್ನುಹುರಿ (ಮೆದುಳಿನ ಬಳ್ಳಿ)ಯಲ್ಲಿ ಉಂಟಾಗುವ ಹಲವಾರು ರೋಗಗಳ ಸ್ವರೂಪವನ್ನು ನಾವು ಸಿಟಿಸ್ಕ್ಯಾನ್ ಅಥವಾ ಎಂಆರ್‌ಐ ಪರೀಕ್ಷೆಗಳಿಂದ ಪತ್ತೆಹಚ್ಚಬಹುದು. ಪೆಟ್ಟಿನಿಂದ ಉಂಟಾಗುವ ಬಾವು, ರಕ್ತಸ್ರಾವ, ಕ್ರಿಮಿಗಳ ಸೋಂಕಿನಿAದ ಉಂಟಾಗುವ ಎಲುಬುಗಳ ಮುರಿತ ಅಥವಾ ಸವಿತ, ಕೀವಿನ ಶೇಖರಣೆ, ಮೆದುಳು ಜ್ವರಗಳು, ಮೆದುಳು ಮತ್ತು ಬೆನ್ನುಹುರಿಯ ಕ್ಷಯರೋಗಗಳು, ಮೆದುಳಿನಲ್ಲಿ ಗಡ್ಡೆ, ರಕ್ತಸ್ರಾವವು, ರಕ್ತನಾಳದ ರಚನೆ, ಸ್ಥಗಿತ, ವಿಕೃತಿಗಳು, ಮೆದುಳು ಮತ್ತು ನರಗಳ ಬೆಳವಣಿಗೆಯಲ್ಲುಂಟಾಗುವ ತೊಂದರೆಗಳನ್ನು ಕಂಡುಹಿಡಿಯಬಹುದು.
ಎಂಆರ್‌ಐ ಪರೀಕ್ಷಣಾ ವಿಧಾನವು ಸಿಟಿ ಸ್ಕ್ಯಾನ್‌ಗಿಂತ ಉನ್ನತಮಟ್ಟದ ತಪಾಸಣಾ ವಿಧಾನವಾಗಿರುತ್ತದೆ. ಈ ಪರೀಕ್ಷೆಯಲ್ಲಿ ರೋಗದ ಎಲ್ಲಾ ರೀತಿಯ ಮಾಹಿತಿಗಳು ದೊರೆಯುತ್ತವೆ. ಈ ತಪಾಸಣೆಗೆ ರೋಗಿಯು ಸಹಕಾರ ಅತ್ಯಗತ್ಯ ಹಾಗಾಗಿ ಮಕ್ಕಳು ಉದ್ರೇಕಗೊಂಡ ರೋಗಿಗಳಿಗೆ ಈ ಪರೀಕ್ಷೆಗೆ ಒಳಪಡಿಸಲು ಒಮ್ಮೊಮ್ಮೆ ಅರಿವಳಿಕೆಯು ಔಷಧಿಗಳ ನೆರವು ಪಡೆಯಲಾಗುತ್ತದೆ.
ಮೆದುಳಿಗೆ ಪೂರೈಕೆಯಾಗುವ ರಕ್ತನಾಳಗಳನ್ನು ಪರೀಕ್ಷಿಸುವ ಕ್ರಮವನ್ನು ಎಂಜಿಯೋಗ್ರಾಫಿ ಎಂದು ಕರೆಯುತ್ತಾರೆ. ಮೆದುಳಿನ ನರಕೋಶಗಳಲ್ಲಿ ಉತ್ಪತ್ತಿಯಾಗುವ ವಿದ್ಯುತ್‌ಚ್ಛಕ್ತಿಯ ಕ್ರಿಯೆಯನ್ನು ಪತ್ತೆಹಚ್ಚಲು ಇಇಜಿ ಎಂಬ ವಿಧಾನವನ್ನು ಬಳಸಲಾಗುತ್ತದೆ. ಇಇಜಿ ತಪಾಸಣೆಯಿಂದ ಮೆದುಳಿನಲ್ಲುಂಟಾಗುವ ಅಸಹಜ ವಿದ್ಯುತ್ ಕ್ರಿಯೆಗಳನ್ನು ಪತ್ತೆಹಚ್ಚಬಹುದು. ನರಗಳ ಎಲ್ಲಾ ಕಾರ್ಯಗಳ ವಿದ್ಯುತ್‌ಕ್ರಿಯೆಯ ಮೂಲಕ ನೆರವೇರುತ್ತವೆ. ಸ್ನಾಯುಗಳ ಚಲನವಲನಗಳಿಗೆ ಅಗತ್ಯವಾದ ನರಗಳು, ಸ್ಪರ್ಶಜ್ಞಾನ ಸಹಿಸುವ ನರಗಳು, ಮೆದುಳನ್ನು ತಲುಪುವ ಕಣ್ಣಿನ ನರಗಳು ಅಥವಾ ಶಬ್ದಗ್ರಹಿಸಲು ಅಗತ್ಯವಾದ ಕಿವಿಯ ನರಗಳು ವಿದ್ಯುತ್ ಕ್ರಿಯೆಯ ಮೂಲಕ ತಮ್ಮ ಕಾರ್ಯಗಳನ್ನು ನೆರವೇರಿಸುತ್ತವೆ.
ಶಬ್ದದ ಅಲೆಗಳು ನಮ್ಮ ಕಿವಿಯಲ್ಲಿರುವ ಕಾಕ್ಲಿಯರ್ ಎಂಬ ಹೆಸರಿನ ನರದ ಮೂಲಕ ಮೆದುಳಿನ ಶಬ್ದಗ್ರಹಣಕ್ಕೆ ಮೀಸಲಾಗಿರುವ ಟೆಂಪೊರಲ್ ಲೋಬ್ ಎಂಬ ಜಾಗವನ್ನು ತಲುಪುತ್ತವೆ. ಶಬ್ದದ ಅಲೆಗಳಿಂದ ಉಂಟಾದ ವಿದ್ಯುತ್ ಕ್ರಿಯೆಯನ್ನು ಯಂತ್ರದ ಸಹಾಯದಿಂದ ಪತ್ತೆಹಚ್ಚುವ ವಿಧಾನವೇ ಬೆರಾ (BERA) ಪರೀಕ್ಷೆ. ಅಕ್ಷಿಪಟಲದ ಮೇಲೆ ಬೀಳುವ ಬಿಂಬವು ಕಣ್ಣಿನ ನರದ ಮೂಲಕ ಮೆದುಳಿನ ಹಿಂಬದಿಯಲ್ಲಿರುವ ಅಕ್ಷಿಪಟಲ ಲೋಬ್ ಎಂಬ ಜಾಗವನ್ನು ತಲುಪುತ್ತದೆ. ಈ ನರದ ಹಾದಿಯು ದೃಷ್ಟಿಯನ್ನು ಎಲ್ಲಾ ವಿಧದಲ್ಲಿ ಗ್ರಹಿಸಲು ಮೀಸಲಾಗಿರುತ್ತದೆ. ದೃಷ್ಟಿಗ್ರಹಿಸಲು ಕಣ್ಣಿನ ನರದ ಹಾದಿಯಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳನ್ನು ಪತ್ತೆಹಚ್ಚುವ ವಿಧಾನವನ್ನು ವಿಇಪಿ ಪರೀಕ್ಷೆ ಎಂದು ಕರೆಯುತ್ತೇವೆ.
ಚಿಕಿತ್ಸೆ:
ಔಷಧೋಪಚಾರಕ್ಕೆ ಸ್ಪಂಧಿಸದ ಅಪಸ್ಮಾರ ರೋಗಿಗಳಿಗೆ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಬಹುದು. ಅವುಗಳಲ್ಲಿ ಅತ್ಯಂತ ಸಾಮಾನ್ಯವಾದವುಗಳೆಂದರೆ, ಲೋಬೆಕ್ಕಮಿ ಮತ್ತು ಕಾರ್ಟಿಕಲ್ ರೀಸೆಕ್ಷನ್, `ಅಪಸ್ಮಾರದ ಜಾಗವನ್ನು ಕೇಂದ್ರೀಕರಿಸಿ, ಶಸ್ತ್ರಚಿಕಿತ್ಸೆಯನ್ನು ನೆರವೇರಿಸಬಹುದು.
ಎದೆಯ ಎಡ ಗೋಡೆಯಲ್ಲಿ ಚಿಕ್ಕ ಪೇಸ್ ಮೇಕರ್‌ನಂತಹ ಒಂದು ಸಾಧನವನ್ನು ಕೂರಿಸಿ ವೈಲ್ ಮೂಲಕ ಅದನ್ನು ವೇಗಸ್ ನರಕ್ಕೆ ಸಂಪರ್ಕಿಸಿ, ನಿಯಮಿತವಾಗಿ ಮೆದುಳಿಗೆ ವಿದ್ಯುತ್ ಪ್ರಚೋದನೆಯನ್ನು ಕಳಿಸಲಾಗುತ್ತದೆ. ಔಷಧೋಪಚಾರಕ್ಕೆ ಸ್ಪಂದಿಸದ ರೋಗಿಗಳಲ್ಲಿ ಮೂರನೇ ಎರಡರಷ್ಟು ಜನಕ್ಕೆ ಇದು ಪ್ರಯೋಜನಕಾರಿ.
ಪಥ್ಯಾಹಾರ: ಅಧಿಕ ಕೊಬ್ಬು ಕಡಿಮೆ ಕಾರ್ಬೋಹೈಡ್ರೈಟ್, ಕಡಿಮೆ ಪ್ರೊಟೀನ್ ಇರುವ ಆಹಾರವನ್ನು ನೀಡಲಾಗುತ್ತದೆ.
ಪ್ರಥಮ ಚಿಕಿತ್ಸೆ: ಅಪಸ್ಮಾರಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿರಿ – ವ್ಯಕ್ತಿಯು ನಿಂತುಕೊಂಡಿದ್ದರೆ, ಆತನನ್ನು ನೆಲದ ಮೇಲೆ ಮಲಗಿಸಿರಿ, ವ್ಯಕ್ತಿಯು ಮಲಗಿದ್ದರೆ, ಆತನ ತಲೆಯಡಿಗೆ ಮೃದುವಾದ ದಿಂಬನ್ನು ಹಾಕಿರಿ, ಆತನನ್ನು ಮಗ್ಗಲು ಮಾಡಿ ಮಲಗಿಸಿ ಮುಖ ನೆಲಕ್ಕೆ ಹತ್ತಿರವಾಗಿರುವಂತೆ ಮಾಡಿರಿ, ಆತ ವಾಂತಿ ಮಾಡಿದರೆ, ಆತನ ಬಾಯನ್ನು ನೆಲದ ಕಡೆ ಮಾಡಿರಿ.
ವ್ಯಕ್ತಿಯು ಏನು ಮಾಡುತ್ತಿದ್ದಾನೆ ಎಂಬುದನ್ನು ನಿಗಾ ಇಟ್ಟು ನೋಡಿರಿ, ನಂತರ ವೈದ್ಯರಿಗೆ ಆ ಸಂದರ್ಭದಲ್ಲಾಗ ಘಟನೆಯನ್ನು ವಿವರಿಸಿ. ಅಪಸ್ಮಾರದ ಹೊಡೆತವು ಸಾಮಾನ್ಯವಾಗಿ ಎರಡರಿಂದ ಮೂರು ನಿಮಿಷ ಮಾತ್ರ ಇರುತ್ತದೆ.
ವ್ಯಕ್ತಿಗೆ ಹೊಡೆತವಾದಾಗ ಆತನ ಬಾಯಿಗೆ ಬಲವಂತದಿಂದ ಏನನ್ನೂ ಹಾಕಬೇಡಿರಿ. ಬೆರಳು ಕಚ್ಚಿ ಹೋಗಬಹುದು. ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಹೊಡೆತ ಮುಗಿದು ವ್ಯಕ್ತಿಯು ಪೂರ್ತಿಯಾಗಿ ಎಚ್ಚರಗೊಂಡು ಚೇತರಿಸಿಕೊಂಡಾಗ ಅವರಿಗೆ ತಿನ್ನಲು ಅಥವಾ ಕುಡಿಯಲು ಏನನ್ನೂ ಕೊಡಬೇಡಿ. ಹೊಡೆತದ ಕಾಲದಲ್ಲಿ ವ್ಯಕ್ತಿ ಹೊಯ್ದಾಡದಂತೆ ಬಲವಂತದಿಂದ ಆತನನ್ನು ಹಿಡಿದುಕೊಳ್ಳಬೇಡಿರಿ ಅಥವಾ ಆತನನ್ನು ಅಲ್ಲಾಡಿಸಿ ಅಥವಾ ಕೂಗಿ ಎಬ್ಬಿಸಲು ಹೋಗಬೇಡಿರಿ.
ಡಾ. ಸರೋಜಾ ಏ ಒ
ನರರೋಗ ತಜ್ಞವೈದ್ಯರ,
ಕೆಎಲ್‌ಇ ಸಂಸ್ಥೆಯ
ಡಾ. ಪ್ರಭಾಕರ ಕೋರೆ ಆಸ್ಪತ್ರೆ,
ಬೆಳಗಾವಿ
ಶೇ. 2ರಷ್ಟು ಜನರಿಗೆ ಜೀವನದಲ್ಲಿ ಒಮ್ಮೆಯಾದರೂ (ಮೂರ್ಛೆರೋಗ) ಅಪಸ್ಮಾರ
