ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾದ ಬೆನ್ನಲ್ಲೇ 4ನೇ ಅಲೆ ಆತಂಕ ಶುರುವಾಗಿದ್ದು, ಆರೋಗ್ಯ ಇಲಾಖೆ ತಜ್ಞರ ಜೊತೆ ಸಭೆ ನಡೆಸಿದೆ. ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಕೆಲ ತಜ್ಞರು, ದೇಶದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಲು ಸಲಹೆ ನೀಡಿದ್ದಾರೆ.

ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯಗೊಳಿಸುವ ಜೊತೆಗೆ ಕೊರೋನಾ ಮಾರ್ಗಸೂಚಿ ಮತ್ತೆ ಜಾರಿಗೊಳಿಸುವ ಬಗ್ಗೆಯೂ ತಜ್ಞರು ಸಲಹೆ ನೀಡಿದ್ದಾರೆ. ಜಿನೋಮಿಕ್ ಸೀಕ್ವೆನ್ಸ್, ಟೆಸ್ಟಿಂಗ್ ಹೆಚ್ಚಳ ಮಾಡಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಬೇಕೆಂದು ಸಲಹೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ಕೊಟ್ಟಿದ್ದಾರೆ.

ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಹೊಸ ಕೋವಿಡ್ ತಳಿ ಕಾಣಿಸಿಕೊಂಡರೆ ನಾಲ್ಕನೇ ಅಲೆ ನಿಶ್ಚಿತವಾದರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ 2-3 ವಾರಗಳು ನಿರ್ಣಾಯಕವಾಗಿದ್ದು, ಕೊವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೊರೊನಾ 4ನೇ ಅಲೆ ಎದುರಿಸಲು ಈಗಿನಿಂದಲೇ ತಯಾರಿ ಶುರುವಾಗಿದೆ. ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದೆ. ಕೊರೊನಾ ಪ್ರಕರಣ ಹೆಚ್ಚಳ ಸಂಬಂಧ ಚರ್ಚೆ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ನಡೆಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಮಾಹಿತಿ ನೀಡಿದ್ದಾರೆ.

4ನೇ ಅಲೆ ಭೀತಿ ನಡುವೆ ದೇಶದಲ್ಲಿ ಸೋಮವಾರ 4,518 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದು ಸುಮಾರು 100 ದಿನಗಳ ಗರಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. ಇದೇ ವೇಳೆ, 9 ಜನರು ಸಾವನ್ನಪ್ಪಿದ್ದಾರೆ.

ಭಾನುವಾರು 4270 ಪ್ರಕರಣ ದಾಖಲಾಗಿದ್ದವು. ಇದಕ್ಕೆ ಹೋಲಿಸಿದರೆ ಸುಮಾರು 250 ಕೇಸುಗಳ ಹೆಚ್ಚಳವಾಗಿದೆ. ಇದೇ ವೇಳೆ 2.78 ಲಕ್ಷ ಪರೀಕ್ಷೆ ನಡೆಸಲಾಗಿದ್ದು, ಭಾನುವಾರ ಶೇ.1.03 ಇದ್ದ ದೈನಂದಿನ ಪಾಸಿಟಿವಿಟಿ ದರ ಸೋಮವಾರ 1.62ಕ್ಕೆ ಏರಿದೆ. ಇದು ಆತಂಕದ ವಿಚಾರ.

ಇನ್ನು ಗುಣಮುಖರ ಸಂಖ್ಯೆ ಕಡಿಮೆ (2279) ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 1730ರಷ್ಟುಏರಿಕೆ ಆಗಿ 25,782ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 25 ಸಾವಿರಕ್ಕಿಂತ ಹೆಚ್ಚಿರುವುದು 3 ತಿಂಗಳಲ್ಲಿ ಇದೇ ಮೊದಲು. ಗುಣಮುಖರ ಪ್ರಮಾಣ ಶೇ.98.73 ಇದೆ. ಈ ನಡುವೆ ದೇಶದಲ್ಲಿ ಈವರೆಗೆ 194.12 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.