ಬೆಳಗಾವಿ : ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು, ಇನ್ನುಳಿದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿಲ್ಲ. ಜನರ ತೀರ್ಮಾನವನ್ನು ಗೌರವಿಸುವ ಜೊತೆಗೆ ಸೋಲಿನ ಕಾರಣಗಳ ಬಗ್ಗೆ ಚಿಂತನೆ ಮಾಡಲಾಗುವುದು. ‘ಗ್ಯಾರಂಟಿ ಯೋಜನೆಗಳು ಜನರಿಗೆ ಇಷ್ಟವಾಗಿಲ್ಲ ಎಂಬುದು ಸುಳ್ಳು. ಇದೇ ಕಾರಣಕ್ಕೆ ತೆಲಂಗಾಣದಲ್ಲಿ ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ನಾವು ಗ್ಯಾರಂಟಿ ಯೋಜನೆಗಳನ್ನು ತಂದಿಲ್ಲ. ಎಲ್ಲ ಧರ್ಮ, ಜಾತಿಯವರಿಗೆ, ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಉದ್ದೇಶದಿಂದ ಜಾರಿಗೊಳಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಕಾಂಗ್ರೆಸ್ಸಿಗರು ರಾಜ್ಯದ ಹಣ ಬಳಸಿ ತೆಲಂಗಾಣದಲ್ಲಿ ಜಾತ್ರೆ ಮಾಡಿದರು’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆರು ತಿಂಗಳು ತೆಗೆದುಕೊಂಡ ಬಿಜೆಪಿ ನಾಯಕರಿಗೆ, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.
‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಜಂಟಿಯಾಗಿಯಾದರೂ ಹೋರಾಡಲಿ, ಪ್ರತ್ಯೇಕವಾಗಿಯಾದರೂ ಹೋರಾಡಲಿ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ’ ಎಂದರು.
*ಉದ್ದೇಶಪೂರ್ವಕ ಹೇಳಿಕೆ ಅಲ್ಲ:*
ಸಚಿವ ಜಮೀರ್ ಅಹ್ಮದ್ ಅವರು ಮುಸ್ಲಿಂ ಸಮುದಾಯದ ಸಭಾಧ್ಯಕ್ಷರಿಗೆ ಎಲ್ಲರೂ ತಲೆಬಾಗಬೇಕು ಎಂಬ ಹೇಳಿಕೆಗೆ ಬಿಜೆಪಿಯವರು ಅವರ ರಾಜಿನಾಮೆಯನ್ನು ಕೇಳುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಸಚಿವ ಜಮೀರ್ ಅಹ್ಮದ್ ಅವರು ಉದ್ದೇಶಪೂರ್ವಕವಾಗಿ ಈ ಹೇಳಿಕೆಯನ್ನು ನೀಡಿಲ್ಲ ಎಂದರು.
ವಿಧಾನಸಭೆಯ ಒಳಗೆ ಸಾವರ್ಕರ್ ಭಾವಚಿತ್ರವನ್ನು ತೆಗೆಯುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ವಿಷಯದ ಬಗ್ಗೆ ಸಭಾಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.