ಬೆಳಗಾವಿ: ತಾಲ್ಲೂಕಿನ ಸಾಂಬ್ರಾದ ಏರ್ಮೆನ್ ತರಬೇತಿ ಶಾಲೆಯ 153 ಯುವತಿಯರು ಶನಿವಾರ ಅಗ್ನಿವೀರ ವಾಯುಸೇನೆಗೆ ಸೇರಿದರು. ಇದು ದೇಶದ ಮೊದಲ ಮಹಿಳಾ ತಂಡ.
ಮಹಿಳೆಯರು ಅಧಿಕಾರಿಗಳಾಗಿ ಸೇನೆಯಲ್ಲಿದ್ದರು. ಆದರೆ, ‘ಅಗ್ನಿಪಥ’ ಯೋಜನೆಯಡಿ ನೇಮಕಗೊಂಡ 153 ಮಹಿಳಾ ಅಗ್ನಿವೀರವಾಯು ಪ್ರಶಿಕ್ಷಣಾರ್ಥಿಗಳ ಮೊದಲ ತಂಡಕ್ಕೆ ಇಲ್ಲಿ 22 ವಾರ ಕಠಿಣ ತರಬೇತಿ ನೀಡಲಾಯಿತು.
153 ಮಹಿಳಾ ಮತ್ತು 2,127 ಪುರುಷ ಅಗ್ನಿವೀರವಾಯು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಆಕರ್ಷಕವಾಗಿ ನಡೆಯಿತು. ವಿವಿಧ ಟ್ರೇಡ್ಗಳ ಅನುಸಾರ ಎಲ್ಲರೂ 8 ವಾರ ಮತ್ತೊಂದು ಹಂತದ ತರಬೇತಿ ಪಡೆದು, ಕರ್ತವ್ಯಕ್ಕೆ ಸೇರ್ಪಡೆ ಆಲಿದ್ದಾರೆ.
ರಾಜಸ್ಥಾನದ ಪ್ರಿಯಾಂಕಾ ಬಡಸರಾ ಮಾತನಾಡಿ, ‘ನಮ್ಮದು ಸೈನಿಕರ ಕುಟುಂಬ. ಕುಟುಂಬದಲ್ಲಿ 13 ಮಂದಿ ಸೇನೆಯಲ್ಲಿದ್ದಾರೆ. ದೇಶಸೇವೆ ಮಾಡಬೇಕು ಎಂಬ ಸೆಳೆತ ಬಾಲ್ಯದಿಂದ ಇತ್ತು. ಕನಸು ಸಾಕಾರವಾಗಿದ್ದಕ್ಕೆ ಖುಷಿಯಿದೆ’ ಎಂದರು.
‘ಮಗಳು ಆಶಿ 6ನೇ ತರಗತಿ ಓದುತ್ತಿದ್ದಾಗಲೇ ಪತಿ ಮೃತಪಟ್ಟರು. ಹಾಗಾಗಿ ಕುಟುಂಬ ಆರ್ಥಿಕ ಬವಣೆಗೆ ಸಿಲುಕಿತು. ಆದರೂ ಛಲ ಬಿಡದ ಮಗಳು ಕೆಲಸ ಮಾಡುತ್ತಲೇ ಓದಿದಳು. ಓದಿಗೆ ತಾನೇ ಹಣ ಹೊಂದಿಸಿಕೊಂಡಳು. ಆಕೆ ಈಗ ಅಗ್ನಿವೀರವಾಯು ಆಗಿ ಹೊರಹೊಮ್ಮಿರುವುದು ಖುಷಿ ತಂದಿದೆ. ನನ್ನ ನೋವುಗಳನ್ನೆಲ್ಲ ಮರೆಸಿದೆ’ ಎಂದು ಬಿಹಾರದ ಅಂಜುದೇವಿ ಶರ್ಮಾ ಅವರು ಹೇಳಿದರು.