ಉಡುಪಿ : ಬೃಹತ್ ಗಾತ್ರದ ಹೆಬ್ಬಾವು ಹಿಡಿದ ಕಾಡಿಗೆ ಬಿಡುವಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಬಾಲಕನೊಬ್ಬ ಯಶಸ್ವಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾನೆ. ಈಗ ಸಮಾಜಿಕ ಮಾದ್ಯಮದಲ್ಲಿ ಅವನದೇ ಸುದ್ದಿ.
ಉಡುಪಿ-ಕುಂದಾಪುರ ನಡುವಿನ ಸಾಲಿಗ್ರಾಮದ ದೇವಾಡಿಗರಬೆಟ್ಟು ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವಿನ ಮಾಹಿತಿ ಪಡೆದ ಈ ಬಾಲಕ ತನ್ನ ತಂದೆ ಜೊತೆ ಅಲ್ಲಿಗೆ ಹೋಗಿದ್ದಾನೆ. ಹುಲ್ಲಿನ ಪೊದೆಯಲ್ಲಿ ಅಡಗಿದ್ದ ಹಾವನ್ನು ಆತನ ತಂದೆ ಹಿಡಿದು ಎಳೆದರೆ ಮಗ ಸ್ವಲ್ಪವೂ ಭಯಗೊಳ್ಳದೆ ಹೆಬ್ಬಾವಿನ ತಲೆಯನ್ನು ಗಟ್ಟಿಯಾಗಿ ಹಿಡಿದು ತನ್ನ ಹತೋಟಿಗೆ ಪಡೆದುಕೊಂಡಿದ್ದಾನೆ.
ಈ ಭಾಗದ ಖ್ಯಾತ ಉರಗ ತಜ್ಞ ಸುಧೀಂದ್ರ ಐತಾಳ ಅವರ ಮಗ ಧೀರಜ್ ನಿಜವಾಗಿಯೂ ಧೀರ. ಆತನ ತಂದೆ ಸಾಲಿಗ್ರಾಮ ಪರಿಸರದಲ್ಲಿ ವಿಷ ಜಂತುಗಳು ಹಾಗೂ ಹಾವುಗಳು ಕಂಡು ಬಂದರೆ ಜನ ಮೊದಲು ಕರೆ ಮಾಡುವುದೇ ಸುಧೀಂದ್ರ ಐತಾಳ ಅವರಿಗೆ.
ಹಲವಾರು ವರ್ಷಗಳಿಂದ ಅವರು ಹಾವುಗಳನ್ನು ಹಿಡಿಯುತ್ತಿದ್ದಾರೆ. ಜೊತೆಗೆ ಅವುಗಳನ್ನು ಸುರಕ್ಷಿತ ಪ್ರದೇಶದಲ್ಲಿ ಬಿಡುತ್ತಾರೆ. ಸೂಕ್ತ ಜಾಗ ಸಿಗದೇ ಹೋದರೆ ಅವುಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ರಕ್ಷಣೆ ಮಾಡುವಷ್ಟು ಅವರಿಗೆ ಹಾವುಗಳ ಮೇಲೆ ಪ್ರೀತಿ. ಇತರ ಕೆಲ ಪ್ರಾಣಿಗಳನ್ನು ಅವರು ಸಾಕುತ್ತಾರೆ. ಅಕ್ರಮವಾಗಿ ಹಾವು ಸಾಕುತ್ತಾರೆ ಎಂಬ ಬಗ್ಗೆ ಅವರ ಮೇಲೆ ದೂರು ಸಹಾ ದಾಖಲಾಗಿತ್ತು.
ತಂದೆ ಸುಧೀಂದ್ರ ಐತಾಳ ಅವರ ಹಾವುಗಳ ಸ್ನೇಹವನ್ನು ಹಾಗೂ ಮನೆಯಲ್ಲಿ ಹಾವುಗಳು ಇರುವ ವಾತಾವರಣ ಗಮನಿಸಿದ ಧೀರಜ್ ಸಣ್ಣ ವಯಸ್ಸಿನಲ್ಲೇ ಯಾವುದೇ ಭಯವಿಲ್ಲದೆ ಹಾವು ಹಿಡಿಯುತ್ತಾನೆ. ತಂದೆ ಕೆಲವೊಮ್ಮೆ ಹಾವು ಹಿಡಿಯುವ ಸಂದರ್ಭದಲ್ಲಿ ಅವರ ಜೊತೆ ಇವನೂ ಹೋಗಿ ಯಾವ ರೀತಿಯಲ್ಲಿ ಹಾವು ಹಿಡಿಯಬೇಕು ಎಂಬ ಮಾಹಿತಿಯನ್ನು ಕರಗತ ಮಾಡಿಕೊಂಡಿದ್ದಾನೆ !
ದೇವಾಡಿಗರಬೆಟ್ಟಿನಲ್ಲೂ ಹಾವು ಕಂಡು ಬಂದು ಫೋನ್ ಕರೆ ಬಂದಾಗ ಹಾವು ಹಿಡಿಯಲು ಸುಧೀಂದ್ರ ಅವರು ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಬೃಹತ್ ಗಾತ್ರದ ಹೆಬ್ಬಾವನ್ನು ತಂದೆ ಎಳೆಯುವಾಗ ಅವರಿಗೆ ಸಹಾಯ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಪ್ಪ ಹಾವಿನ ಬಾಲವನ್ನು ಎಳೆದರೆ ಧೀರಜ್ ಹಾವಿನ ತಲೆಯ ಭಾಗವನ್ನು ಹಿಡಿಯಲು ಹೋಗಿದ್ದಾನೆ. ಆದರೆ, ಬೃಹತ್ ಗಾತ್ರದ ಹಾವಿನ ತೆರೆದ ಬಾಯಿಯನ್ನು ತಪ್ಪಿಸಿ ತಲೆಯನ್ನು ಹಿಡಿಯಲು ಸಾಕಷ್ಟು ಅನುಭವ ಬೇಕು, ತಾನು ತಂದೆಯ ಜೊತೆಗೆ ಇದ್ದಾಗ ಅವರು ಏನು ಮಾಡುತ್ತಿದ್ದರು ಎನ್ನುವುದನ್ನು ಗಮನಿಸಿದ ಬಾಲಕ ಅದರ ತಲೆಗೆ ಕೈ ಹಾಕಿ ಹಿಡಿದಿದ್ದಾನೆ. ಬಳಿಕ ತಂದೆ- ಮಗ ಇಬ್ಬರೂ ಸೇರಿ ಹಾವನ್ನು ಪೊದೆಯಿಂದ ಹೊರಗೆಳೆದ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದ್ದು ಹಾವನ್ನು ಹಿಡಿದಾಗ ಅದು ಸಾಕಷ್ಟು ಹೋರಾಟ ಮಾಡಿದೆ.
ಅದು ಸುರುಳಿ ಹಾಕಲು ಬಂದಾಗ ಬಾಲಕ ಅದಕ್ಕೆ ಅವಕಾಶ ಕೊಡದೆ ಹಿಡಿದಿದ್ದಾನೆ. ಬಾಲಕನ ನಿರ್ಭೀತಿಗೆ ಜನ ಹುಬ್ಬೇರಿಸಿದ್ದಾರೆ.