ಬೆಳಗಾವಿ : ಮನುಷ್ಯರ ಮೇಲಿನ ಅಪಾರ ಪ್ರೀತಿಗಾಗಿ ಶ್ವಾನಗಳು ಆಗಾಗ ಅವರನ್ನು ಹಿಂಬಾಲಿಸುತ್ವುತವೆ. ಇಲ್ಲೊಂದು ನಾಯಿಯು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಜೊತೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸಾಥ ನೀಡುತ್ತಿದೆ.

ಕಾರ್ತಿಕ ಮಾಸ ಆರಂಭಗೊಳ್ಳುತ್ತಿದ್ದಂತೆಯೇ ಅಯ್ಯಪ್ಪ ಭಕ್ತರ ದಂಡು ಶಬರಿಮಲೆಯತ್ತ ಹೆಜ್ಜೆ ಹಾಕುತ್ತಿದೆ. ಊರು ಕೇರಿಗಳಲ್ಲಿ ಅಯ್ಯಪ್ಪನ ಭಕ್ತಿಸುಧೆಯೇ ಹರಿಯುತ್ತಿದೆ. ಶಬರಿಮಲೆಯ ಯಾತ್ರಾರ್ಥಿಗಳ ಜೊತೆ ಶ್ವಾನವೊಂದು ಶಬರಿಮಲೆಯತ್ತ ಹೆಜ್ಜೆ ಹಾಕಿದ್ದು ಆಶ್ಚರ್ಯ ಮೂಡಿಸಿದೆ.

ಬೆಳಗಾವಿಯಿಂದ ಹೊರಟ ಶಬರಿಮಲೆ ಮಾಲಾಧಾರಿಗಳ ಪಾದಯಾತ್ರೆಯಲ್ಲಿ ಶ್ವಾನ ಪ್ರತಿದಿನ ಅವರ ಜೊತೆ ನಲ್ವತ್ತು ಕಿಲೋಮೀಟರ್ ಹೆಜ್ಜೆ ಹಾಕುತ್ತಿದ್ದು, ಅಯ್ಯಪ್ಪನ ಮೇಲಿನ ಭಕ್ತಿಯನ್ನು ತೋರಿಸಿದೆ.

ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳ ತಂಡ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ನವೆಂಬರ್ 4 ರಂದು ಪಾದಯಾತ್ರೆ ಶುರು ಮಾಡಿದ್ದ ಈ ತಂಡಕ್ಕೆ ಗೋಕಾಕ ತಾಲೂಕಿನ ಗ್ರಾಮದಿಂದ ಶ್ವಾನವೊಂದು ಅಯ್ಯಪ್ಪ ಮಾಲಾಧಾರಿಗಳನ್ನು ಹಿಂಬಾಲಿಸಿದೆ. ಈಗಾಗಲೇ ಈ ಶ್ವಾನ ತಂಡದೊಂದಿಗೆ ಸುಮಾರು 600 ಕಿಮೀ ಕ್ರಮಿಸಿದೆ. ಬೆಕ್ಕೇರಿ ಗ್ರಾಮದ ಹತ್ತು ಮಂದಿ ಮಾಲಾಧಾರಿಗಳ ತಂಡ ಈಗ ಮಂಗಳೂರು ಮೂಲಕ ಕಾಸರಗೋಡಿಗೆ ತಲುಪಿದ್ದಾರೆ.

ಇದನ್ನು ಎಷ್ಟು ಓಡಿಸಿದರು ಇದು ಹಿಂಬಾಲಿಸುವುನ್ನು ಬಿಟ್ಟಿಲ್ಲ. ನಂತರ ಅಯ್ಯಪ್ಪ ಭಕ್ತರು ಇದನ್ನು ತಮ್ಮ ಜೊತೆ ಸೇರಿಸಿಕೊಂಡು 600 ಕಿಲೋಮೀಟರ್ ಸಾಗಿದ್ದಾರೆ. ಇದಕ್ಕೆ ತಾವು ಸೇವಿಸುವ ಆಹಾರವನ್ನು ನೀಡುತ್ತಾರೆ. ತಾವು ನೀಡುವ ಆಹಾರ ಬಿಟ್ಟು ಬೇರೆ ಯಾರು ಆಹಾರ ನೀಡಿದರೆ ಸೇವಿಸುವುದಿಲ್ಲ ಎನ್ನುತ್ತಾರೆ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳು. ಬೆಳಗ್ಗೆ 3:00ಗೆ ಕಾಲ್ನಡಿಗೆ ಆರಂಭಿಸುತ್ತೇವೆ. ರಾತ್ರಿ ಎಂಟಕ್ಕೆ ದಾರಿ ಮಧ್ಯೆ ಸಿಗುವ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತೇವೆ. ವಿಶ್ರಾಂತಿ ಪಡೆದುಕೊಂಡು ನಂತರ ನಮ್ಮ ಜೊತೆ ಹೊರಟು ನಿಲ್ಲುತ್ತದೆ ಎನ್ನುತ್ತಾರೆ ಮೌನೇಶ್ ಬಡಿಗೇರ್.