ಬೆಳಗಾವಿ ಅ. 3 : ರಾಜ್ಯದಲ್ಲಿ ಕೋಮು-ಗಲಭೆ ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದ್ದು, ಕೋಮು ಗಲಭೆ ಸೃಷ್ಟಿಸಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಿಲ್ಲಿ ಎಚ್ಚರಿಸಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದುಗಾರರೊಂದಿಗೆ ಮಾತನಾಡಿದ ಅವರು,  ಶಿವಮೊಗ್ಗದಲ್ಲಿ ಈದ್-ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಿ ಗಲಾಟೆ ಮಾಡಿದವರನ್ನು ನಮ್ಮ ಪೊಲೀಸರು ಈಗಾಗಲೇ ಬಂಧಿಸಿ, ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದ ಅವರು, ಶಿವಮೊಗ್ಗ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಹಜ, ಅದಕ್ಕೆ ಯಾವುದೇ ರೀತಿ ಅಡ್ಡಿ ಮಾಡುವುದಿಲ್ಲ. ಆದರೆ, ಪ್ರತಿಭಟನೆಗೆ ಸಕಾರಣವಿರಬೇಕು. ಅಲ್ಲದೇ ಶಾಂತಿಯುತವಾಗಿರಲಿ ಎಂದು ಸಲಹೆ ನೀಡಿದರು. ಮಾಡಲಿ ಎಂದರು.

ರಾಜ್ಯ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂಬ ಆರೋಪಕ್ಕೆ ನಮ್ಮ ಸರ್ಕಾರದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ಎಲ್ಲ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇನ್ನು ಶಾಮನೂರು ಶಿವಶಂಕರಪ್ಪ ಅವರು ಪಕ್ಷದ ಹಿರಿಯ ನಾಯಕರು, ಅವರೊಂದಿಗೆ ಈ ಕುರಿತು ಮಾತನಾಡುತ್ತೇನೆ ಎಂದು ಹೇಳಿದರು.

ಆರೋಪ ಮಾಡುವುದೇ ಬಿಜೆಪಿಯವರ ಕೆಲಸ. ಆದರೆ, ಆರೋಪ ಮಾಡಿದ್ದೆಲ್ಲ ಸತ್ಯವಲ್ಲ. ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಳೇ ಹುಬ್ಬಳ್ಳಿ ಗಲಭೆ ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ದಾಖಲಾದ ಪ್ರಕರಣ ಹಿಂದಕ್ಕೆ ಪಡೆಯುವ ಯಾವುದೇ ಪ್ರಸ್ತಾವ ನಮ್ಮ ಸರ್ಕಾರದ ಮುಂದಿಲ್ಲ. ವಕೀಲರು, ಹೋರಾಟಗಾರರು ಒಂದು ಪತ್ರ ಬರೆದಿದ್ದಾರೆ. ಅದನ್ನು ಆಧರಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಪತ್ರ ಬರೆದಿದ್ದಾರೆ. ಆ ಪತ್ರವನ್ನು ನಾನು ಕೂಡ ಇಂದೇ ನೋಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.