ಬೆಳಗಾವಿ: ಅಂಗನವಾಡಿ ಕೇಂದ್ರ ಅಭಿವೃದ್ಧಿಗೆ 80 ಲಕ್ಷ ಖರ್ಚು ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಕಾಮಗಾರಿಗಳ ಛಾಯಾಚಿತ್ರ ಗಮನಿಸಿದರೆ ಅಷ್ಟೊಂದು ದುಡ್ಡು ಖರ್ಚು ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವೆಡೆ ಅವೈಜ್ಞಾನಿಕವಾಗಿ ಸೈಕಲ್ ಟ್ರ್ಯಾಕ್ ಮಾಡಲಾಗಿದೆ. ಈ ಬಗ್ಗೆ ಗಮನಹರಿಸಬೇಕು. ಇದೇ ರೀತಿ ನಿರಂತರ ನೀರು ಯೋಜನೆಯ ಕಾಮಗಾರಿಗಳಿಂದ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆ. ಅವುಗಳ ದುರಸ್ತಿಗೆ ಸೂಚನೆ ನೀಡಬೇಕು ಎಂದರು.

ಬೆಳಗಾವಿ ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನ ಕೂಡ ನೀಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಕ್ಷೇತ್ರದಲ್ಲಿ ಯಾವ ಕಾಮಗಾರಿ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಲಿಖಿತವಾಗಿ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ನಿಯಮ ಉಲ್ಲಂಘನೆ- ತನಿಖೆಗೆ ಒತ್ತಾಯ: ವ್ಯಾಕ್ಸಿನ್ ಡಿಪೋ ದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಮರಗಳನ್ನು ಕತ್ತರಿಸಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಮಾರ್ಟ್ ಸಿಟಿ ಕಾಮಗಾರಿ ಗುಣಮಟ್ಟದ ಬಗ್ಗೆ ಹಾಗೂ ನಿಯಮಾವಳಿ ಉಲ್ಲಂಘನೆ ಕುರಿತು ದೂರುಗಳಿದ್ದರೆ ಸಂಪೂರ್ಣವಾಗಿ ಎಲ್ಲ ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು.

ವೈಟ್ ಟಾಪಿಂಗ್ ಖರ್ಚು ಅಚ್ಚರಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಉಳಿತಾಯ ಹಣದಲ್ಲಿ ಹೊಸ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಿದ್ಧಪಡಿಸುವಾಗ ತಮ್ಮ ಗಮನಕ್ಜೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ನಗರದಲ್ಲಿ ಒಟ್ಟು 53 ಕಿ.ಮೀ. ವೈಟ್ ಟಾಪಿಂಗ್ ಮಾಡಲು ಅತೀ ಹೆಚ್ಚು ಹಣ ಖರ್ಚು ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಆದಾಯ ನಿರ್ವಹಣೆಗೆ ಸಮಿತಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿರುವ ವಿವಿಧ ಗ್ಯಾಲರಿ, ಕಲಾಮಂದಿರ ಇತ್ಯಾದಿಗಳಿಂದ ಎಷ್ಟು ಆದಾಯ ಬರಬಹುದು ಎಂಬುದರ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಇದುವರೆಗೆ ಯಾವುದೇ ರೀತಿಯ ಆದಾಯ ಆರಂಭವಾಗಿರುವುದಿಲ್ಲ̤ ಆರಂಭಗೊಂಡ ಬಳಿಕ ತಮ್ಮ ಅಧ್ಯಕ್ಷತೆಯ ಸಮಿತಿಯ ವತಿಯಿಂದ ನಿರ್ವಹಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ವ್ಯಸ್ಥಾಪಕ ನಿರ್ದೇಶಕರಾದ ಸಯೀದಾ ಆಫ್ರೀನ್ ಬಾನು ಬಳ್ಳಾ̧ರಿ ಅವರು, ಒಟ್ಟಾರೆ 930 ಕೋಟಿ ವೆಚ್ಚದಲ್ಲಿ 102 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 96 ಕಾಮಗಾರಿಗಳು ಪೂರ್ಣಗೊಂಡಿವೆ. ಆರು ಚಾಲ್ತಿಯಲ್ಲಿವೆ. ಇದಲ್ಲದೇ ಪಿಪಿಪಿ ಮಾದರಿಯಲ್ಲಿ 211 ಕೋಟಿ ರೂಪಾಯಿ ವೆಚ್ಚದಲ್ಲಿ 6 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಂದು ಪೂರ್ಣಗೊಂಡಿದೆ. ಇಲ್ಲಿವರೆಗೆ ಕೇಂದ್ರ ಸರಕಾರದಿಂದ 441 ಕೋಟಿ ಹಾಗೂ ರಾಜ್ಯ ಸರಕಾರದಿಂದ 439 ಕೋಟಿ ರೂಪಾಯಿ ಹೀಗೆ ಒಟ್ಟು 880 ಕೋಟಿ ಬಿಡುಗಡೆಯಾಗಿದ್ದು, ಕೇಂದ್ರ 49 ಕೋಟಿ ಹಾಗೂ ರಾಜ್ಯದಿಂದ 61 ಕೋ.ರೂ.ಗಳ ಅನುದಾನ ಸೇರಿ 110 ಕೋ.ರೂ.ಗಳ ಬಾಕಿ ಇದೆ ಎಂದು ವಿವರಿಸಿದರು.

ಸಭೆಯಲ್ಲಿ ಉತ್ತರದ ಶಾಸಕ ಆಸಿಫ್‌ (ರಾಜು) ಸೇಠ್‌, ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.