ಬೆಳಗಾವಿ,: ಆರೋಗ್ಯವೆಂದರೆ ರೋಗವಿಲ್ಲದವನು ಎಂಬರ್ಥವಲ್ಲ. ಬೆಳಗಾಗೆದ್ದು ಉಲ್ಲಸಿತನಾಗಿ ಇದ್ದು, ಯಾವುದೇ ತೊಂದರೆಯಿಲ್ಲದೇ ನಿತ್ಯ ಕಾಯಕದಲ್ಲಿ ತೊಡಗಿಕೊಂಡು ನಗುಮೊದಿಂದ ಖುಷಿಯಾಗಿ ಇರುತ್ತಾನೆಯೋ ಅವನೇ ನಿಜವಾದ ಆರೋಗ್ಯವಂತ ವ್ಯಕ್ತಿ. ಏಕೆಂದರೆ ಆಧುನಿಕತೆಯ ಜಂಜಾಟದಲ್ಲಿರುವ ಅತ್ಯಧಿಕ ಜನರಲ್ಲಿ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದಾರೆ. ವೈದ್ಯವಿಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಕೂಡ ಗುಣಮುಖವಾಗಲು ಕೆಲಸಮಯ ಬೇಕು. ಆದರೆ ಅವಸರದ ಕಾಲಘಟ್ಟದಲ್ಲಿರುವ ರೋಗಿಗಳಿಗೆ ದಿನ ಬೆಳಗಾಗುವುದರೊಳಗೆ ಗುಣವಾಗಬೇಕು.
ತಾಂತ್ರಿಕತೆ ಅಭಿವೃದಿ ಹೊಂದಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣವು ಅತ್ಯಂತ ಪರಿಣಾಮ ಬೀರುತ್ತಿದೆ. ಅಂಗೈಯಲ್ಲಿರುವ ಪರದೆಯನ್ನು ಜಾಲಾಡಿ ರೋಗಕ್ಕೆ ಯಾವ ಔಷಧಿಯನ್ನು ತೆಗೆದುಕೊಳ್ಳಬೇಕೆಂದು ಸ್ವಯಂ ನಿರ್ಧಾರ ಮಾಡುತ್ತಿರುವದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಜಾಲತಾಣ ಹಾಗೂ ವೈದ್ಯರಲ್ಲದವರೂ ವೈದ್ಯಕೀಯ ಚಿಕಿತ್ಸಾ ಸಲಹೆ ನೀಡುತ್ತಿರುವದರಿಂದ ಸ್ವಯಂ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಭಾರತವು ವಿಶ್ವದಲ್ಲಿನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ಜನಸಂಖ್ಯೆಗೆ ತಕ್ಕಂತೆ ವೈದ್ಯರ ಲಭ್ಯತೆ ಇಲ್ಲ. ವೈದ್ಯರ ಕೊರತೆ ಮತ್ತು ವೈದ್ಯಕೀಯ ಸೇವೆ ಪಡೆಯುವಲ್ಲಿ ಇರುವ ಅಡಚಣೆಗಳು ಒಂದೆಡೆಯಾದರೆ, ಒಮ್ಮೆ ವೈದ್ಯರ ಬಳಿ ಹೋದಾಗ ನೀಡುವ ಮಾತ್ರೆಯನ್ನೇ ಹಲವು ಬಾರಿ ಸೇವಿಸುವದು. ಅನಾರೋಗ್ಯಕ್ಕೀಡಾದರೆ ಯಾರಿಗೋ ನೀಡಿದ ಮಾತ್ರೆಗಳನ್ನು ಸೇವಿಸುವದು, ವೈದ್ಯರ ಬಳಿ ಹೋದರೆ ಸಮಯ ಹಾಳಾಗುವದಲ್ಲದೇ, ವೆಚ್ಚವಾಗುತ್ತದೆ ಎಂಬ ಕಾರಣದಿಂದ, ಜಾಲಾತಾಣ ಜಾಲಾಡಿ, ವೈದ್ಯರಲ್ಲದವರ ಸಲಹೆಯ ಪರಿಣಾಮವಾಗಿ ಸ್ಥಳೀಯವಾಗಿ ಸಿಗುವ ಔಷಧ ಅಂಗಡಿಗಳಲ್ಲಿ ಮಾತ್ರೆ ಸೇವಿಸಿ, ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವದು ಬಹಳ ಅಪಾಯಕಾರಿ.
ಸಾರ್ವಜನಿಕರು ಮಾತ್ರೆಗಳ ಮೇಲೆ ಅವಲಂಬಿತರಾಗುತ್ತಿದ್ದು, ಸುರಕ್ಷಿತವೆಂದು ಭಾವಿಸುತ್ತಾರೆ. ವೈದ್ಯರ ಚೀಟಿ ಇಲ್ಲದೆ ಪಡೆಯಬಹುದಾದ ಔಷಧಿಗಳ ಬಳಕೆ ಹೆಚ್ಚಾಗುತ್ತಿದೆ, ಏಕೆಂದರೆ ಅವು ಸುರಕ್ಷಿತವೆಂದು ಜನರು ಭಾವಿಸುತ್ತಾರೆ. ಸ್ವಯಂ ವೈದ್ಯಪದ್ದತಿಯು ಕೆಲವೊಂದು ಸಂದರ್ಭಗಳಲ್ಲಿ ತಪ್ಪಾದ ಔಷಧ ಸೇವನೆಯಿಂದ ರೋಗ ಹೆಚ್ಚಾಗಿ, ಔಷಧಗಳ ಅಡ್ಡ ಪರಿಣಾಮ, ತಪ್ಪಾದ ಪ್ರಮಾಣ ಅಥವಾ ಬಳಕೆ ವಿಧಾನ, ವೈದ್ಯರ ಭೇಟಿಯಲ್ಲಿ ವಿಳಂಬ, ಔಷಧ ಅವಲಂಬನೆ, ತಪ್ಪಾದ ಔಷಧ ಸೇವನೆಯಿಂದ ಲಕ್ಷಣಗಳನ್ನು ಮಾತ್ರ ಕಡಿಮೆಗೊಳಿಸಿ, ನಿಜವಾದ ರೋಗವನ್ನು ಕಂಡುಹಿಡಿಯುವಲ್ಲಿ ಅಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ನೋವು ನಿವಾರಕಗಳು, ಕೆಮ್ಮಿನ ಸಿರಪ್ಗಳು, ಮಲಬದ್ಧತೆ ನಿವಾರಕಗಳು, ಅಲರ್ಜಿ ಔಷಧಿಗಳು ಮುಂತಾದವುಗಳನ್ನು ವೈದ್ಯರ ಸಲಹೆ ಇಲ್ಲದೇ ತೆಗೆದುಕೊಳ್ಳುತ್ತಾರೆ. ಅಪಾಯವಿಲ್ಲವೆಂದು ನಂಬಿ ಸ್ವಯಂ ಔಷಧೋಪಚಾರವು ಔಷಧ ಅವಲಂಬನೆ ಹಾಗೂ  ವ್ಯಸನಕ್ಕೂ ಕಾರಣವಾಗಬಹುದು. ವೈದ್ಯರನ್ನು ಭೇಟಿ ಮಾಡುವ ಅಗತ್ಯವಿಲ್ಲದೆ ಸಮಯ ಮತ್ತು ಹಣ ಉಳಿಯುತ್ತದೆ ಎಂಬ ಕಾರಣದಿಂದ ಸ್ವಯಂ ಔಷಧೋಪಚಾರ ಮಾಡುತ್ತಾರೆ. ಲಕ್ಷಣಗಳು ಕಂಡ ತಕ್ಷಣ ಔಷಧ ತೆಗೆದುಕೊಳ್ಳುವುದರಿಂದ ತಕ್ಷಣವೇ ಪರಿಹಾರ ಸಿಗುತ್ತದೆ ಎಂದು ಭಾವಿಸುತ್ತಾರೆ. ಆರೋಗ್ಯ ಸಮಸ್ಯೆ ಉಂಟಾದರೆ, ಸ್ವಯಂ ಔಷಧೋಪಚಾರವು ಹಲವಾರು ವೈದ್ಯರ ಭೇಟಿ ಹಾಗೂ ಗಂಭೀರ ಆನಾರೋಗ್ಯ ಹಾಗೂ ಸಾವಿಗೂ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡುತ್ತಾರೆ ಹಿರಿಯ ತಜ್ಞವೈದ್ಯರಾದ ಡಾ. ಎಂ ಎಸ್‌ ಕರಿಶೆಟ್ಟಿ ಅವರು.
ಸ್ವಾತಂತ್ರ್ಯ ಹೋರಾಟಗಾರ, ಪ್ರಸಿದ್ದ ವೈದ್ಯ, ಶಿಕ್ಷಣ ತಜ್ಞ ಹಾಗೂ ಅದಕ್ಕಿಂತ ಮುಖ್ಯವಾಗಿ ರಾಜಕಾರಣಿಯಾಗಿ ದಶಕದವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಾ. ಬಿ ಸಿ ರಾಯ್ ಅವರ ಸ್ಮರಾಣಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಡಾ. ರಾಯ್ ಅವರು ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದು, 1961ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿದ ಹೆಗ್ಗಳಿಕೆ ಅವರದು. ಅವರೊಬ್ಬರು ಮಾನವೀಯ ಕಳಕಳಿಯುಳ್ಳ ವೈದ್ಯರು.
ತಾಳ್ಮೆ ಸಹನೆ ಎಂಬುದಂತೂ ಇಲ್ಲವೇ ಇಲ್ಲ. ಎಲ್ಲರೂ ಅಂತರ್ಜಾಲದ ಮೂಲಕ ಜಾಲಾಡಿ ರೋಗಗಳ ಬಗ್ಗೆ ಅರ್ಧಂಬರ್ಧ ತಿಳಿದುಕೊಂಡು ವೈದ್ಯರ ಮುಂದೆ ಜಾಣತನ ಪ್ರದರ್ಶಿಸಿ ವೈದ್ಯರ ಹಾದಿ ತಪ್ಪಿಸುವಲ್ಲಿ ಮಹತ್ತರ ಪಾತ್ರ ವಹಿಸುವುದೂ ಉಂಟು. ರೋಗಿಗಳಿಗಂತೂ ಈಗಿನ ಧಾವಂತ, ವೇಗದ ಜಗತ್ತಿನಲ್ಲಿ ದಿನಬೆಳಗಾಗುವುದರೊಳಗೆ ರೋಗ ವಾಸಿಯಗಬೇಕೆನ್ನುವ ಆಸೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದಲ್ಲಿ ವೈದ್ಯ ಮತ್ತು ರೋಗಿಗಳ ನಡುವೆ ಸುಮಧುರ ಬಾಂದವ್ಯ ಮೂಡಲೇ ಬೇಕು. ರೋಗಿಗಳು ಕೂಡ ತಾಳ್ಮೆ ಸಂಯಮ ಕಾಯ್ದುಕೊಳ್ಳಬೇಕು. ವೈದ್ಯರ ಮೇಲೆ ಸಂಪೂರ್ಣ ಭರವಸೆ ಇಡಬೇಕು. ಎಲ್ಲ ಸಮಸ್ಯೆಗಳನ್ನೂ ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ದಿನ ಬೆಳಗಾಗುವುದರೊಳಗೆ ಯಾವ ವೈದ್ಯರಿಗೂ ಯಾವ ರೋಗವನ್ನು ಗುಣ ಪಡಿಸಲು ಅಸಾಧ್ಯ ಎಂಬ ಸತ್ಯವನ್ನು ರೋಗಿಗಳು ಅರಿತು ಸಂಯಮದಿಂದ ವರ್ತಿಸಿದಲ್ಲಿ ವೈದ್ಯರ ಕೆಲಸ ಸುಲಭವಾಗುವುದರಲ್ಲಿ ಎರಡು ಮಾತಿಲ್ಲ.
ವೈದ್ಯಕೀಯ ವೃತ್ತಿ ಎನ್ನುವುದು ರೋಗಿಗಳ ಸೇವೆ ಮಾಡುವ ಪವಿತ್ರವಾದ ವೃತ್ತಿ. ವೈದ್ಯರು ನೀಡುವ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ರಕ್ತನಾಳಗಳು ತುಂಡಾಗಿ ತೀವ್ರ ರಕ್ತಸ್ರಾವವಾದಾಗ, ಹೃದಯ ಸ್ತಂಬನವಾಗಿ ಎದೆ ಬಡಿತ ನಿಂತುಹೋದಾಗ, ವೈದ್ಯರು ಸಾಕ್ಷಾತ್ ದೇವರಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ತೀವ್ರ ಪ್ರಯತ್ನದ ಬಳಿಕವೂ ಸಾವು ಸಂಭವಿಸಿದಲ್ಲಿ, ವೈದ್ಯರನ್ನೇ ಸಾವಿಗೆ ಹೊಣೆಮಾಡಿ, ಹಲ್ಲೆ, ಹಿಂಸಾಚಾರ ಆಸ್ಪತ್ರೆ ಮೇಲೆ ದಾಳಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದು ಮಾನವೀಯತೆಯ ಲಕ್ಷಣವಲ್ಲ. ಅನೇಕ ಸಂದರ್ಭಗಳಲ್ಲಿ ರೋಗಿಯ ಆರೋಗ್ಯ ತೀವ್ರವಾಗಿ ಹದಗೆಟ್ಟು ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಆಗ ರೋಗಿಯನ್ನು ಬದುಕಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಅದನ್ನು ಜನರು ಹಾಗೂ ರೋಗಿಯ ಸಂಬಂಧಿಕರು ಅರ್ಥ ಮಾಡಿಕೊಂಡು ಶಾಂತ ರೀತಿಯಿಂದ ವರ್ತಿಸಬೇಕು.
ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ-ರೋಗಿಯ ಸಂಬಂಧವೂ ಹಳಸಿದ ಲಕ್ಷಣಗಳು ಕಂಡುಬರುತ್ತಿವೆ. ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನಿಡುವ ಔಷಧಿಗಳು ಎಷ್ಟು ಮುಖ್ಯವೋ ಅದೇ ರೀತಿ ವೈದ್ಯರ ಮೇಲಿನ ವಿಶ್ವಾಸ, ನಂಬಿಕೆಗಳು ಅತೀ ಅವಶ್ಯಕ. ವೈದ್ಯರು ಕೂಡಾ ನಿಮ್ಮಂತೆಯೇ ಮನುಷ್ಯರು ಅವರಿಗೂ ತಮ್ಮದೇ ಆದ ಇತಿ ಮಿತಿಗಳಿವೆ, ಅವರಿಗೂ ವೈಯಕ್ತಿಕ ಬದುಕು ಇದೆ ಎಂಬುದನ್ನು ರೋಗಿಗಳು ಅರ್ಥಮಾಡಿಕೊಳ್ಳಬೇಕು. ವೈದ್ಯರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಸರಿಯಾದ ದಾರಿಯಲ್ಲಿ ಸಾಗಿದರೆ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬಹುದು.
*ಬಸವರಾಜ ಸೊಂಟನವರ*