ಬೆಳಗಾವಿ : ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ಒಬ್ಬರು ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು ಇಡೀ ದೇಶವೇ ಈಗ ಬೆಳಗಾವಿ ಜಿಲ್ಲೆಯ ಗಮನ ಸೆಳೆದಿದೆ. 2025ನೇ ಸಾಲಿನ ಭಾರತೀಯ ಅರಣ್ಯ ಸೇವೆ ಪರೀಕ್ಷೆ (ಐಎಫ್ ಎಸ್)ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ ಕೆಂಪವಾಡ(25) ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಸವದಿಯ ಖಾಸಗಿ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ, ರಾಯಬಾಗ ತಾಲ್ಲೂಕಿನ ಅಳಗವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಬಸವರಾಜ ವ್ಯಾಸಂಗ ಮಾಡಿದ್ದರು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಯಲ್ಲಟ್ಟಿಯಲ್ಲಿ ಪಿಯುಸಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿ.ಎಸ್ಸಿ(ಅರಣ್ಯ) ಓದಿದರು. ನಂತರ ಬೆಂಗಳೂರಿಗೆ ತೆರಳಿ ಸ್ವಯಂ ಅಧ್ಯಯನ ಕೈಗೊಂಡಿದ್ದರು.
ಬಸವರಾಜ ಅವರದ್ದು ಕೃಷಿ ಕುಟುಂಬ. ಮೂರುವರೆ ಎಕರೆ ಜಮೀನಿದೆ. ಕಿರಿಯ ಮಗನ ಸಾಧನೆ ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ.
ಕಳೆದ ಸಲ ಐಎಫ್‌ಎಸ್ ಪೂರ್ವಭಾವಿ ಪರೀಕ್ಷೆಯಲ್ಲೂ ಬಸವರಾಜ ಉತ್ತೀರ್ಣರಾಗಿರಲಿಲ್ಲ. ಆದರೆ, ಛಲ ಬಿಡದೆ ಓದಿ, ಈಗ ಇಡೀ ದೇಶಕ್ಕೆ ಮೊದಲ ಸ್ಥಾನ ಗಳಿಸಿದ್ದು ಖುಷಿ ತಂದಿದೆ. ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿನೊಂದಿಗೆ ಅಧ್ಯಯನ ಮುಂದುವರಿಸಿದ್ದಾನೆ ಎಂದು ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್‌ಸ್ಟೆಬಲ್ ಆಗಿರುವ ಹಿರಿಯ ಸಹೋದರ ಸಿದ್ದು ಕೆಂಪವಾಡ ತಿಳಿಸಿದ್ದಾರೆ.
IFS ಪರೀಕ್ಷೆ: ಸವದಿಯ ಬಸವರಾಜ ದೇಶಕ್ಕೆ ಪ್ರಥಮ
