ಬೆಳಗಾವಿ,: ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಒಂದು ಸೈನಿಕ ಶಿಸ್ತನ್ನು ಕಳಿಸುತ್ತದೆ. ರಾಷ್ಟ್ರನಿರ್ಮಾಣದಲ್ಲಿ ಯುವಜನಾಂಗದ ಪಾತ್ರವನ್ನು ತಿಳಿಸುತ್ತದೆ. ʼಸಿʼ ಸರ್ಟಿಫಿಕೇಟ್‌ ಪೂರೈಸುವ ಕೆಡೆಟ್‌ಗಳಿಗೆ ಭಾರತೀಯ ಸೈನ್ಯದಲ್ಲಿ ವಿಪುಲ ಅವಕಾಶಗಳು ಇವೆ ಎಂದು 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ ಕಮಾಡಿಂಗ್‌ ಆಫೀಸರ್‌ ಕರ್ನಲ್‌ ಸುನೀಲ ದಾಗರ ಹೇಳಿದರು.
ಅವರು ಲಿಂಗರಾಜ ಕಾಲೇಜಿನಲ್ಲಿ ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪಥಸಂಚಲನ ಆರ್‌ಡಿಸಿಯಲ್ಲಿ ರಾಷ್ಟ್ರೀಯ ಸಾಧನೆ ಮಾಡಿದ ಧೀರಜ್‌ ಭಾವಿಮನೆ ಹಾಗೂ ಸೈನಿಕ ಶಿಬಿರದಲ್ಲಿ ರಾಷ್ಟ್ರೀಯ ಸಾಧನೆ ಮಾಡಿದ ಓಂಕಾರ ಲೋಗಾವಿಗೆ ಅವರನ್ನು ಸತ್ಕರಿಸಿ ಮಾತನಾಡಿದರು.
ಬದುಕಿನಲ್ಲಿ ಗುರಿ ಇಟ್ಟುಕೊಳ್ಳಬೇಕು. ಅವಕಾಶಗಳು ಸಾಕಷ್ಟು ದೊರೆಯುತ್ತವೆ, ಆದರೆ ನಿಷ್ಠೆಯಿಂದ ಪರಿಶ್ರಮದಿಂದ ಅಧ್ಯಯನದಲ್ಲಿ ತೊಡಗಬೇಕು. ಇಂದು ಭಾರತೀಯ ಸೇನೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿದೆ. ಹೆಚ್ಚೆಚ್ಚು ಉನ್ನತ ಹುದ್ದೆಗಳಿಗೆ ಹೋಗಲು ಪ್ರಯತ್ನಿಸಬೇಕು. ನಮ್ಮ ಕನಸುಗಳು ದೊಡ್ಡದಾಗಿರಬೇಕು, ಅದರೆಡೆಗೆ ನಮ್ಮ ಹೋರಾಟವು ಅಗತ್ಯವಾಗಿದೆ. ತಂದೆ ತಾಯಿಗಳ ಕನಸುಗಳನ್ನು ನೀವು ಈಡೇರಿಸಿದರೆ ಅದರಂತಹ ಸಾಧನೆ ಮತ್ತೊಂದಿಲ್ಲ. ಬಟಾಲಿಯನ್‌ ಕೀರ್ತಿಯನ್ನು ಹೆಚ್ಚಿಸಿದ ಇರ್ವ ಕೆಡೆಟ್‌ಗಳು ಎಲ್ಲರಿಗೂ ಮಾದರಿಯಾಗಿದ್ದು ಅವರ ಸಾಧನೆಗೆ ಬೆಲೆಕಟ್ಟಲಾಗದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾರ್ಚಾಯ ಡಾ.ಎಚ್‌.ಎಸ್‌.ಮೇಲಿನಮನಿಯವರು ಮಾತನಾಡುತ್ತ, ಕಾಲೇಜು ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದೆ. ಎನ್‌ಸಿಸಿ , ಎನ್‌ಎಸ್‌ಎಸ್‌, ಕ್ರೀಡಾ ಘಟಕಗಳು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ಪರ್ಧಾತ್ಮಕ ದಿನಗಳಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ. ನಿಮಗೆ ಬೇಕಾದ ಸೌಕರ್ಯಗಳನ್ನು ಕಾಲೇಜು ಸದಾ ಪೂರೈಸಲಿದೆ ಎಂದು ಕೆಡೆಟ್‌ಗಳನ್ನು ಅಭಿನಂದಿಸಿದರು.
ಎನ್‌ಸಿಸಿ ಅಧಿಕಾರಿ ಮೇಜರ್‌ ಮಹೇಶ ಗುರನಗೌಡರ ಮಾತನಾಡಿ, ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವುದರ ಹಿಂದೆ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರ ಕೊಡುಗೆ ಬಹುದೊಡ್ಡದು. ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಕಾಲೇಜು ಹೆಚ್ಚು ಸಾಧನೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಟೇಲ್‌ ಉದ್ಯಮಿ ಸಂತೋಷ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
ವೇದಿಕೆ ಮೇಲೆ ಸುಬೇದಾರ ಮೇಜರ್‌ ಕಲ್ಲಪ್ಪಾ ಪಾಟೀಲ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ಡಾ.ಸಿ.ರಾಮರಾವ್‌, ರವಿ ಬಡಿಗೇರ, ಶಶಿಕಾಂತ ಕೊಣ್ಣೂರ, ಎನ್‌ಸಿಸಿ ಕೆಡೆಟ್‌ಗಳು ಉಪಸ್ಥಿತರಿದ್ದರು.