ಬೆಳಗಾವಿ,: ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಬೆಳಗಿ, 38 ವಿದ್ಯಾಕೇಂದ್ರಗಳ KLE ಸಂಸ್ಥೆಯನ್ನು 310 ಕ್ಕೇರಿಸಿ, ಅದೆಷ್ಟೋ ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ, ಹಸಿದವರಿಗೆ ಅನ್ನವನಿತ್ತು, ಕಲಿತವರಿಗೆ ಉದ್ಯೋಗ ನೀಡಿ, ಬಡವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು 500 ಹಾಸಿಗೆಯ ಆಸ್ಪತ್ರೆ ಕಟ್ಟಿ, ಕನ್ನಡದ ಕಣ್ಮಣಿಯಾಗಿ ಹೋರಾಟ ಮಾಡಿ, ವಿಶ್ವ ಕನ್ನಡ ಸಮ್ಮೇಳನದ ರೂವಾರಿಯಾಗಿ, ಬೆಳಗಾವಿಗೆ ಸರ್ಕಾರವನ್ನೇ ಸ್ಥಳಾಂತರಿಸಿ ಅಧಿವೇಶನ ನಡೆಸಿ, ನಮಗರಿವಿಲ್ಲದಂತೆಯೇ ಈ ನಾಡು, ನುಡಿ, ಸಮಾಜ ಹಾಗೂ ಲೋಕಕಲ್ಯಾಣಕ್ಕಾಗಿ ಸದ್ದಿಲ್ಲದೇ ತನ್ನನು ತಾನು ಸವೆಸಿ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಬದುಕುತ್ತಿರುವ ಅಜಾತ ಶತ್ರು ನಮ್ಮ ಪ್ರಭಾಕರ ಕೋರೆ.
20 ನೆಯ ಶತಮಾನದ ಆದಿಯಲ್ಲಿ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಆಕಾಂಕ್ಷೆ ಇಟ್ಟುಕೊಂಡ ಪ್ರತಿಯೊಂದು ಮಗು ಶಿಕ್ಷಣಕ್ಕಾಗಿ ಹವಣಿಸಿ, ಮುಗಿಲ ಕಡೆಗೆ ಮುಖಮಾಡಿ ಭಗವಂತನನ್ನು ಪ್ರಾರ್ಥಿಸುತ್ತಿದ್ದ ಸಮಯದಲ್ಲಿ ಬಸವಾದಿ ಶರಣರ ಹೊಸ ಅವತಾರದಂತೆ, ಈ ಭಾಗದ ಮಕ್ಕಳ ಭವಿಷ್ಯಕ್ಕೆ, ವಿದ್ಯಾರ್ಜನೆಗೆ ಒಂದು ದಾರಿ ಸಿಗಲಿ, ನಮ್ಮ ನಿಮ್ಮೆಲ್ಲರ ಬಾಳು ಶಿಕ್ಷಣ ಪಡೆದು ಹಸನಾಗಲಿ ಎಂಬ ಮಹತ್ವಾಕಾಂಕ್ಷೆಯಿಂದ ತಮ್ಮ ತನು ಮನ ಧನ ಸವೆಸಿ, ಸಮಸ್ತ ಆಸ್ತಿ ಪಾಸ್ತಿಗಳನ್ನು ದಾನ ಮಾಡಿ ಏಳು ಜನ ಸಪ್ತರ್ಷಿಗಳು ಅಂದು ಕರ್ನಾಟಕ ಲಿಂಗಾಯತ ಶಿಕ್ಷಣ ( KLE ) ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ದಶಕಗಳು ಕಳೆದಂತೆ ಹತ್ತಾರು ಜನ ಈ ಶಿಕ್ಷಣ ಸಂಸ್ಥೆಯನ್ನು ತಮ್ಮ ತಮ್ಮ ಕೊಡುಗೆಯ ಮೂಲಕ ಬೆಳೆಸುತ್ತ ಬಂದರು. ಅಂತೆಯೇ ಇಂದಿಗೆ ಸುಮಾರು ನಾಲ್ಕು ದಶಕಗಳ ಕೆಳಗೆ 1984 ರಲ್ಲಿ ಈ ಮಹೋನ್ನತ ಸಂಸ್ಥೆಯ ಚುಕ್ಕಾಣಿ ಹಿಡಿದರು ನಮ್ಮ ಶ್ರೀ ಪ್ರಭಾಕರ ಕೊರೆಯವರು.
ಪ್ರಭಾಕರ ಕೊರೆಯವರ ಕುರಿತು ಹೇಳಲು ಹೊರಟಾಗ KLE ಸಂಸ್ಥೆಯ ಬಗ್ಗೆ ಹೇಳಲೇ ಬೇಕು, ಈ ಸಂಸ್ಥೆಯೊಂದು ಜಗದಗಲ ವ್ಯಾಪಿಸಿರುವ ಅಸಾಮಾನ್ಯ ಶಿಕ್ಷಣ ಸಾಗರ. ಇಂದು 310 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾವಿರಾರು ಜನ ನೌಕರಸ್ಥರು ಈ KLE ಕುಟುಂಬದ ಭಾಗವಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯಿಂದ ಜೀವನದ ಬೆಳಕು ಪಡೆದವರು ಲಕ್ಷಾಂತರ ಜನ, ಅವರಲ್ಲಿ ಅದೆಷ್ಟೋ ಜನ ಈ ನಾಡಿನ ಮುಖ್ಯಮಂತ್ರಿಗಳಾದರು, ಹಲವರು ದೇಶದ ಅತೀ ದೊಡ್ಡ ಉದ್ಯಮಿಗಳಾದವರು, ಅನೇಕರು ವಿಜ್ಞಾನಿಗಳು, ಸಾವಿರಾರು ಜನ ವಿದೇಶಗಳಲ್ಲಿಅತ್ಯುನ್ನತ ಹುದ್ದೆಯಲ್ಲಿದ್ದಾರೆ. ದೆಹಲಿ , ದುಬೈ , ಮುಂಬೈ ಬೆಂಗಳೂರು ಸೇರಿದಂತೆ ಜಗತ್ತಿನ ಮಹಾ ನಗರಗಳಲ್ಲಿ ಇಂದು ಬೆಳಗಾವಿಯಿಂದ ಆರಂಭವಾದ ನಮ್ಮ ಈ ಶಿಕ್ಷಣ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಜಗಕ್ಕೆಲ್ಲ ಜ್ಞಾನದ ಬೆಳಕನ್ನು ಹರಡುತ್ತಿದೆ. ಆ ಬೆಳಕಿನ ಹಿಂದಿನ ನಂದಾ ದೀಪವೇ ನಮ್ಮ ಪ್ರಭಾಕರ ಕೊರೆಯವರು. ಆ ನಂದಾದೀಪ ಕಳೆದು ನಾಲ್ಕು ದಶಕಗಳಿಂದ ತನ್ನ ಜೀವನದ ಮಹತ್ವದ ಸಮಯವನ್ನೆಲ್ಲ KLE ಸಂಸ್ಥೆಯ ಅಭಿವೃದ್ದಿಗಾಗಿ ವ್ಯಯಿಸಿ, ಇಂದು ಅದೊಂದು ಪ್ರಚಂಡ ಸೂರ್ಯನ ಹಾಗೆ ಬೆಳಗುವಂತೆ ಮಾಡಿದೆ.
ಈ ನಾಡಿನಲ್ಲಿ ಬೆಳೆದು ಅಳಿದು ಹೋದ ಅನೇಕ ಮಹಾಪುರುಷರು, ಅವರ ಕೊಡುಗೆಗಳ ಬಗ್ಗೆ ನಾವು ಅನೇಕ ಸಂದರ್ಭಗಳಲ್ಲಿ ಕೇಳುತ್ತೇವೆ. ಅಂದಿನ ಮೈಸೂರಿನ ಅರಸರು, ಕೆಂಪೇಗೌಡರಿಂದ ಹಿಡಿದು ಇಂದಿನ ಗಣಿ ಧಣಿಗಳವರೆಗೆ ಅನೇಕರ ಹೆಸರು ಓಡಾಡುತ್ತಲೇ ಇರುತ್ತವೆ. ಅವರ ಸಾಧನೆ, ಅವರ ಕಥೆಗಳು, ಯಶೋಗಾಥೆಗಳು ಕವನಗಳಾಗಿ, ಚಲನಚಿತ್ರಗಳಾಗಿ, ಟಿವಿ ಸಿರಿಯಲ್ಲಾಗಳಾಗಿ ನಮ್ಮ ಮುಂದೆ ಕಂಗೊಳಿಸುವುದು ಸಹಜ. ಆದರೆ ಸಣ್ಣ ಪುಟ್ಟ ಪಾನ ಶಾಪ್ ಇಟ್ಟುಕೊಂಡವ ‘ಲೆಕ್ಕ ಅರ್ಥವಾಗಲಿಲ್ಲ ಹಾಗಾಗಿ ನನ್ನ ಅಂಗಡಿ ಮುಳುಗಿ ಹೋಯಿತು’ ಎಂದು ಅದನ್ನು ಮುಚ್ಚುವಂತಹ ಪರಿಸ್ಥಿತಿ ಇರುವ ನಮ್ಮ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನ ಜಗದಗಲ ಪಸರಿಸಿ, ಕೈಗಾರಿಕಾ ಕ್ರಾಂತಿ ಮಾಡಿ, ಅಮೆರಿಕದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದು, ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿ, ಮೂರು ಬಾರಿ ರಾಜ್ಯಸಭಾ ಸಂಸದರಾಗಿ, 7 ವರ್ಷ ಎಂ ಎಲ್ ಸಿ ಯಾಗಿ, ಹತ್ತು ಹಲವು ರೀತಿಯಲ್ಲಿ ಜನಸೇವೆಗೈದು ಬಡವರ ಬಾಳಿನ ಬೆಳಕಾದ ನಮ್ಮ ಉತ್ತರ ಕರ್ನಾಟಕದ ಕಲ್ಯಾಣ ಪುರುಷ ಪ್ರಭಾಕರ ಕೊರೆಯವರ ಬಗ್ಗೆ ಎಂದಾದರೂ ಪ್ರಚಾರವಾದದನ್ನು ಕಂಡಿದ್ದೀರಾ ? ಪ್ರಾಯಶಃ ಇಲ್ಲ. ಅಲ್ಲವೇ ?
ದಕ್ಷಿಣ ಕರ್ನಾಟಕದ ಹಲವರಿಗೆ ಈ ಹೆಸರು ಕಿವಿಯ ಮೇಲೂ ಬಿದ್ದಿಲ್ಲವೇನೋ, ಬಿದ್ದರೂ ಉತ್ತರ ಕರ್ನಾಟಕದ ಯಾವುದೋ ಹೆಸರಿರಬಹುದು ಎಂದು ಎಂದಿನಂತೆ ಅಲಕ್ಷಿಸಿರುತ್ತಾರೆ ಬಿಡಿ, ಇರಲಿ. ಅದರ ಬಗ್ಗೆ ಇಲ್ಲಿ ಚರ್ಚೆ ಬೇಡ. ಆದರೆ ಇಷ್ಟಾದರೂ ಕೋರೆಯವರ ಸಾಧನೆಯ ವಿಷಯ ಏಕೆ ಜನಕ್ಕೆ ತಲುಪಲಿಲ್ಲ ಎಂಬುದನ್ನು ಆಲೋಚಿಸಿದರೆ ಸಿಗುವ ಉತ್ತರ, ಒಂದು ಅವರು ಅದನ್ನು ಪ್ರಚಾರಿಸಲಿಲ್ಲ ಎಂಬುದುದಾಗಿರಬಹುದು, ಇಲ್ಲವೇ ಎಲ್ಲ ಅರಿತಿದ್ದರೂ, ಫಲಾನುಭವಿಗಳಾಗಿದ್ದರೂ ಉತ್ತರ ಕರ್ನಾಟಕದ ನಮ್ಮ ಅತೀ ಉದಾರ ಮನಸ್ಥಿತಿಯ ಜನ ತಮ್ಮ ಅಸ್ತಿತ್ವವನ್ನೇ ಮರೆತಂತೆ ಪರೋಪಕಾರಿಗಳ ಉಪಕಾರವನ್ನು ಮರೆತು, ಯಾರಿಗೂ ಅದನ್ನು ಹರಡದೆ ಹಂಚದೇ ತಮ್ಮೊಳಗೆಯೇ ನುಂಗಿ ನೀರು ಕುಡಿದದ್ದೂ ಇರಬಹುದು. ಅದೂ ಇರಲಿ. ( ಜ್ಞಾನವನ್ನು ಬಳಸಿಕೊಂಡು ರಾಜಕೀಯಗೊಳಿಸುವ ಹಾಗು ಪ್ರಚಾರಕ್ಕೆ ಉಪಯೋಗಿಸುವ ವಿಷಯದಲ್ಲಿ ನಾವು ಉತ್ತರ ಕರ್ನಾಟಕದವರು ಸ್ವಲ್ಪ ಅಶಕ್ತರೇ). ಅದರೊಟ್ಟಿಗೆ ಹುಚ್ಚ ವೆಂಕಟನನ್ನೂ, ಅವನ ತಮ್ಮ ಆ MLA ಯನ್ನು, ಬಿಗ್ ಬಾಸ್ ಸ್ಪರ್ದಿಗಳನ್ನೂ, ಡ್ರಗ್ಸ್ ರಾಣಿಯರನ್ನು, ರೀಲ್ಸ್ ರಾಜರನ್ನು, ನಾಲ್ಕು ಎಂಜಲು ಕಾಸಿನ ಆಸೆಗೆ ನಮ್ಮ ಸಂಸ್ಕೃತಿಯನ್ನು ಅಶ್ಲೀಲವಾಗಿ ಬಿಂಬಿಸುತ್ತಿರುವ ಯುಟ್ಯುಬರ್ ಗಳನ್ನೂ ವಿಜೃಂಬಣೆಗೊಳಿಸುವ ಇಂದಿನ ಸಾಮಾಜಿಕ ಮಾಧ್ಯಮ ವ್ಯವಸ್ಥೆಗೂ ಸಾಧಕರ ಸಾಧನೆ ತೋರಿಸಿ ಪ್ರೇರಣೆ ನೀಡುವುದಕ್ಕಿಂತ ಮಸಾಲೆ ಭರಿತ ಹುಳುಕು ತೋರಿಸಿ ಚಪ್ಪಾಳೆ ಗಿಟ್ಟಿಸುವ ಪ್ರೇತ ಮೆತ್ತಿಕೊಂಡಂತಾಗಿರುವುದೂ ಕಾರಣವಾಗಿರಬಹುದು. ಒಟ್ಟಾರೆಯಾಗಿ ನಮ್ಮಲ್ಲಿರುವ ನ್ಯೂನ್ಯತೆಗಳೇ ನಮ್ಮಿಂದ ಒಳಿತನ್ನು ಬಿತ್ತರಿಸುವ ಸತ್ಕಾರ್ಯದ ಕರ್ತವ್ಯಲೋಪ ಮಾಡಿಸುತ್ತರುವುದಂತೂ ನಿಜ. ಈ ಎಲ್ಲ ಪರಿಸ್ಥಿತಿಗಳನ್ನು ಮೀರಿ ಹಿರಿಯ ಸಾಧಕರ ಜೀವನ ಚರಿತ್ರೆ, ಅವರ ಪರಿಶ್ರಮ, ತ್ಯಾಗ, ಬಲಿದಾನಗಳನ್ನು ಅರಿತು, ಪರೋಪಕಾರಿಯಾಗಿ ಬದುಕುವ ವ್ಯವದಾನವನ್ನು ಭಗವಂತ ಇಂದಿನ ಪೀಳಿಗೆಗೆ ಕರುಣಿಸಲಿ ಎಂದು ಪ್ರಾರ್ಥಿಸೋಣ.
ಒಂದು ಸಶಕ್ತ, ಸದೃಢ ರಾಷ್ಟ್ರ ನಿರ್ಮಾಣವಾಗಬೇಕು ಎಂದಾದರೆ ಆ ರಾಷ್ಟ್ರದಲ್ಲಿ ವ್ಯಕ್ತಿ ಹಾಗು ವ್ಯಕ್ತಿತ್ವ ನಿರ್ಮಾಣವಾಗಬೇಕಾದದ್ದು ಬಹು ಮುಖ್ಯ. ಅಂತಹ ವ್ಯಕ್ತಿತ್ವದಲ್ಲಿ ಬೆಳೆದ ಸತ್ಪುರುಷರು ‘ನಾವಳಿದರೂ ನಮ್ಮಳಿವಿನ ನಂತರವೂ ಈ ರಾಷ್ಟ್ರದ ಭವಿಷ್ಯ ಭಧ್ರವಾಗಬೇಕು’ ಎಂಬ ಚಿಂತನೆಯೊಂದಿಗೆ ಬದುಕುತ್ತಾರೆ, ಆ ಚಿಂತನೆಗಾಗಿ ತಮ್ಮದೇ ಆದ ಕೊಡುಗೆಯನ್ನು ಈ ದೇಶ ಕಂಡ ಮಹಾಪುರುಷರೆಲ್ಲ ನೀಡುತ್ತಲೇ ಬಂದಿದ್ದಾರೆ. ಅಂತಹ ಮಹಾಪುರುಷರೆಲ್ಲ ತಮ್ಮ ಜೀವನ ಸವೆಸಿ ಕಟ್ಟಿದ ಈ ನಾಡಿನ ಏಳಿಗೆಗಾಗಿ, ಇಂದಿನ ಪೀಳಿಗೆಯ ಅವಶ್ಯಕತೆಗಳನ್ನು ಅರಿತು, ತಮ್ಮದೇ ಶೈಲಿಯಲ್ಲಿ ರಾಷ್ಟ್ರ ನಿರ್ಮಾಣ ಮಾಡುತ್ತಿರುವ ಹಲವಾರು ಮಹನೀಯರಲ್ಲಿ ನಮ್ಮ ಕೋರೆಯವರು ಒಬ್ಬರು. ಅವರು ಮಾಡುತ್ತಿರುವ ಈ ಕಾಯಕವೇನು ಅವರಿಗೆ ಸುಲಭದಿಂದ ಲಭಿಸಿರುವುದಲ್ಲ. ದೇಹವನ್ನು ಸೀಳಿದ ಆ ಗುಂಡು ಇನ್ನೂ ಅವರ ದೇಹದಲ್ಲೇ ಇದ್ದರೂ, ಅವರು ಮಾಡುತ್ತಿರುವ ಸಮಾಜಮುಖಿ ಕೆಲಸಗಳಲ್ಲಿ ಹತ್ತು ಹಲವು ತೊಡಕುಗಳು ಬಂದರೂ, ತಾವು ಕೈ ಹಿಡಿದಾಕೆಯ ಆರೋಗ್ಯ ಹದಗೆಟ್ಟು ಸಂಸಾರ ತಾಪತ್ರೆಯಗಳು ಬಂದರು, ಜೊತೆಗಿರುವ ಹಲವಾರು ಜನ ಅಧಿಕಾರದ ಆಸೆಗೆ ಪ್ರತಿನಿತ್ಯ ಅವರ ಕಾಲೆಳೆದರು, ನಂಬಿದ ಪಕ್ಷ ಅವರಿಂದ ರಾಜ್ಯ ಸಭೆಯ ಪದವಿ ಕಿತ್ತುಕೊಂಡರು ಕೋರೆಯವರು ತಮ್ಮ ಕಾಯಕದಿಂದ ವಿಮುಖರಾಗಿಲ್ಲ. ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಎಂಬುದೇ ಅವರ ಧ್ಯೇಯ ಮಂತ್ರವಾಗಿ, ಪ್ರತಿಫಲದ ಅಪೇಕ್ಷೆಯನ್ನೇ ಇಟ್ಟುಕೊಳ್ಳದೆ ದುಡಿದು ಸಾಧಕಾರದವರಿವರು.
ತಮ್ಮ ದುಡಿಮೆಯ ಭಾಗದ ಒಂದಂಶವನ್ನು ಒಂದೊಮ್ಮೆಯೂ ಜನಕಲ್ಯಾಣಕ್ಕೆ ಬಳಸದ ನಿಂದಕರು, ಅಸಹಿಷ್ಣುಗಳು ಕೆಲವೊಮ್ಮೆ ಈ ಶಿಕ್ಷಣ ಸಂಸ್ಥೆಯ ಹೆಸರಲ್ಲಿ ಹಣ ವಸೂಲಿ ಆಗುತ್ತದೆ, ಆಸ್ಪತ್ರೆಯ ಬಿಲ್ ಜಾಸ್ತಿ ಎನ್ನುವ ಆರೋಪಗಳನ್ನು ಮಾಡುತ್ತಿರುತ್ತಾರೆ, ಆದರೆ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಿ, ರೋಗ ಎಂದು ಬಂದವರಿಗೆ ಉಚಿತ ಆಸ್ಪತ್ರೆ ಕಟ್ಟಿ, ಉದ್ಯೋಗ ಅರಸಿ ಬಂದವರಿಗೆ ದುಡಿಯುವ ಅವಕಾಶ ಕೊಟ್ಟು, ತಾನೆಂದು ಪ್ರಚಾರ ಬಯಸದೆ ಲೋಕಕಲ್ಯಾಣಕ್ಕಾಗಿ ದುಡಿಯುತ್ತಿರುವ ಕೊರೆಯವರು ಇವ್ಯಾವ ನಿಂದನೆಗಳಿಂದಲೂ ವಿಚಲಿತರಾಗದೆ ತಮ್ಮ ಜೀವನದ ಸಾರ್ಥಕತೆಯ ಕಡೆಗೆ. ಈ ನಾಡಿನ ದೇಶದ ಸೇವೆಯ ಕಡೆಗೆ ದಿಟ್ಟ ಹೆಜ್ಜೆಗಳನ್ನಿಡುತ್ತ ಸಾಗುತ್ತಲಿದ್ದಾರೆ. ಅಂತಹ ನಮ್ಮ ಕಾಯಕ ಯೋಗಿ ಈಗ 77 ವರ್ಷಗಳನ್ನು ಪೂರ್ಣಯಿಸಿ, 78 ನೆಯ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಧರ್ಭದಲ್ಲಿ ಅವರಿಂದ ಪ್ರಭಾವಿತರಾದ ಎಲ್ಲ ಮಹನೀಯರ ವತಿಯಿಂದ , ಅವರಿಂದ ಉಚಿತವಾಗಿ ವಿದ್ಯಾದಾನ ಪಡೆದ ವಿದ್ಯಾರ್ಥಿಗಳ ವತಿಯಿಂದ, ಅವರಿಂದ ಅರೋಗ್ಯ ಸುಧಾರಿಸಿಕೊಂಡು ಹೊಸ ಜೀವನ ಪಡೆದ ಎಲ್ಲ ರೋಗಿಗಳ ಕಡೆಯಿಂದ, ಉದ್ಯೋಗ ಪಡೆಕೊಂಡು ಜೀವನ ಸಾಗಿಸುತ್ತೀರುವವರ ವತಿಯಿಂದ ಹಾಗು ಕೋರೆಯವರ ಎಲ್ಲ ಅಭಿಮಾನಿಗಳ ವತಿಯಿಂದ ಭಗವಂತ ಅವರಿಗೆ ಪೂರ್ಣಾಯಸ್ಸು ನೀಡಲಿ, ಆರೋಗ್ಯ ವೃದ್ಧಿಸಲಿ, ಯಶಸ್ಸು ಕೀರ್ತಿ ಅವರ ಚರಿತ್ರೆಯನ್ನು ಬೆಳಗಲಿ ಎಂದು ಪ್ರಾರ್ಥಿಸಿ. ಶೀಘ್ರದಲ್ಲೇ ಅವರು ರಾಜ್ಯಪಾಲ, ಉಪರಾಷ್ಟ್ರಪತಿಯಂತಹ ಉನ್ನತ ರಾಜಕೀಯ ಹುದ್ದೆಗೇರಲಿ ಎಂದು ಆಶಿಸಿ ಶುಭಾಶಯಗಳನ್ನು ತಿಳಿಸುತ್ತೇವೆ.

ಮಹಾಂತೇಶ ವಕ್ಕುಂದ