ಬೆಳಗಾವಿ: ಗೋಕಾಕ ಉಗ್ರಾಣದಲ್ಲಿ 98 ಲಕ್ಷ ರೂಪಾಯಿ ಮೌಲ್ಯದ ಔಷಧಿ ಅವಧಿ ಮೀರಿದೆ. ಜನವರಿಯಿಂದ ಈವರೆಗೆ 6 ಲಕ್ಷ ರೂ. ಮೌಲ್ಯದ ಔಷಧಿ ಅವಧಿ ಮೀರಿದ್ದು ಕಂಡು ಬಂದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ತಿಳಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಂದ ಐದಾರು ತಾಲೂಕುಗಳ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ಸರಬರಾಜು ಆಗುತ್ತದೆ. ಆ ಔಷಧಿ ಉಪಯೋಗ ಮಾಡಿಲ್ಲ. ಜನರ ದುಡ್ಡು ಈ ರೀತಿಯಲ್ಲಿ ಪೋಲು ಆಗಲು ಬಿಡಬೇಕಾ..? ನಾವು ಈ ನಿಟ್ಟಿನಲ್ಲಿ ಕೇಸ್ ದಾಖಲು ಮಾಡಿದ್ದೇವೆ. ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ, ಉಗ್ರಾನದ ಉಸ್ತುವಾರಿಯನ್ನು ಭಾಗಿದಾರರನ್ನಾಗಿ ಮಾಡಿ ನೋಟಿಸ್ ಕೊಟ್ಟು ಕಾರಣ ಕೇಳುತ್ತೇವೆ. ಅವರ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇನ್ನು ಔಷಧಿ ಖರೀದಿಸುವ ಸಂದರ್ಭದಲ್ಲೆ ಅವಧಿ ಅರ್ಧದಷ್ಟು ಮುಗಿದಿರುತ್ತದೆ. ಅವು ಆಯಾ ಆಸ್ಪತ್ರೆಗೆ ಹಂಚಿಕೆ ಆಗುವಷ್ಟರಲ್ಲಿ ಅವಧಿ ಮೀರಿರುತ್ತದೆ. ಹಾಗಾಗಿ, ಇದನ್ನೂ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾಧ್ಯಂತ ಎಲ್ಲಾ ಔಷಧಿಗಳ ಉಗ್ರಾಣದಲ್ಲಿ ತನಿಖೆ ನಡೆಸುತ್ತೇವೆ ಎಂದರು.
ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಪರಿಶೀಲನೆ ಮಾಡಿದ್ದೇವೆ. ದೂರು ಬಂದಿದ್ದು ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದೇವೆ. ನಾವು ಬರುವ ಮಾಹಿತಿ ಹಿನ್ನೆಲೆಯಲ್ಲಿ ಕೆಲವರು ಎಚ್ಚರ ವಹಿಸಿ ತಮ್ಮ ಕೆಲಸವನ್ನು ನಿಖರವಾಗಿ ಮಾಡಿಕೊಂಡಿದ್ದಾರೆ. ಆಸ್ಪತ್ರೆ, ಪಾಲಿಕೆ, ನಗರಸಭೆ, ತಹಶೀಲ್ದಾರ, ಭೂಮಾಪನಾ ಇಲಾಖೆ, ಅಬಕಾರಿ, ಸ್ಮಾರ್ಟ್ ಸಿಟಿ ಕಚೇರಿಗೆ ಭೇಟಿಗೆ ಕೊಟ್ಟಿದ್ದೇವೆ. ಬೆಳಗಾವಿ ಮಾದರಿ ಜಿಲ್ಲೆ ಮಾಡಬೇಕು. ಭ್ರಷ್ಟಚಾರ ಹೊಡೆದು ಓಡಿಸಬೇಕು. ಪಾರದರ್ಶಕ ಆಡಳಿತ ನೀಡುವ ಗುರಿಯನ್ನು ಹೊಂದಿದ್ದೇವೆ. ಇನ್ನು ಬೆಳಗಾವಿ ಪ್ರವಾಸ ಮುಗಿದಿದ್ದು, ಮುಂದೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.
ಬೆಳಗಾವಿ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಕೆಲ ವಿಚಿತ್ರ ನಡೆದಿವೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವ ಆಸ್ತಿಯನ್ನು‌ ಮಾರಾಟ ಮಾಡಿದ ಮೂರು ಪ್ರಕರಣಗಳು ಗಮನಕ್ಕೆ ಬಂದಿವೆ. ಯಾರದ್ದೋ ಆಸ್ತಿಯನ್ನು ಯಾರು ಬೇಕಾದರೂ ಮಾರಾಟ ಮಾಡುತ್ತಿದ್ದಾರೆ. ಸಂಘಟನಾತ್ಮಕವಾಗಿ ಹಗಲು ದರೋಡೆ ನಡೆಯುತ್ತಿದೆ. ವಯಸ್ಸಾದವರನ್ನು, ಅನಕ್ಷರಸ್ಥರನ್ನೆ ಗುರಿ ಮಾಡುತ್ತಿದ್ದಾರೆ. ಇದರಲ್ಲಿ ಸಬ್ ರಜಿಸ್ಟರ್ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈ ಜೋಡಿಸಿರುವುದು ನಮಗೆ ಗೊತ್ತಾಗಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಭೂದಾಖಲೆ ನಿರ್ದೇಶಕರ ಕಚೇರಿಯಲ್ಲಿ 3 ಸಾವಿರ ಪ್ರಕರಣಗಳು ಬಾಕಿ ಇವೆ. ಅವುಗಳನ್ನು ಸಕಾಲದಲ್ಲಿ 30 ದಿನಗಳಲ್ಲಿ ಪರಿಹರಿಸಬೇಕು. ಇದನ್ನು ಪ್ರಶ್ನಿಸಿದರೆ ನಮಗೆ ಸಿಬ್ಬಂದಿ ಕೊರತೆ ಇದ್ದಾರೆ ಎಂದು ಉತ್ತರಿಸಿದ್ದಾರೆ. ಹಾಗಾಗಿ, ಇದರಲ್ಲಿ ಸಾಮೂಹಿಕ ಅಕ್ರಮ ಕಂಡು ಬಂದಿದೆ ಎಂದರು.
ನಾನು ಲೋಕಾಯುಕ್ತ ನ್ಯಾಯಮೂರ್ತಿ ಆದಾಗ 13 ಸಾವಿರ ಪ್ರಕರಣಗಳು ಇದ್ದವು. ಅದರಲ್ಲಿ 6 ಸಾವಿರ ಪ್ರಕರಣಗಳನ್ನು ಬಗೆಹರಿಸಿದ್ದೇವೆ. ಈಗ ನಾವು ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ಲೋಕಾಯುಕ್ತ ಮೇಲೆ ವಿಶ್ವಾಸ ಬಂದಿದ್ದು, ಸದ್ಯ 25 ಸಾವಿರ ಪ್ರಕರಣಗಳು ದಾಖಲಾಗಿವೆ. ನಾವು ಕೇವಲ 35 ನ್ಯಾಯಾಧೀಶರು ಮಾತ್ರ ಇದ್ದೇವೆ. ಇನ್ನು ಎಲ್ಲಾ ಜಿಲ್ಲೆಗಳಲ್ಲಿ ಲೋಕಾಯುಕ್ತ ಎಸ್ಪಿಗಳು ಇಲ್ಲ. ಸಾಕಷ್ಟು ಸಿಬ್ಬಂದಿಗಳಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ನಮಗೆ ಅಗತ್ಯ ಇರುವಷ್ಟು ಸಿಬ್ಬಂದಿಗಳನ್ನು ನೀಡುವಂತೆ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಬಿ.ಎಸ್.ಪಾಟೀಲ ಹೇಳಿದರು.
ಇನ್ನು ಬಿಮ್ಸ್ ನ ಹೆರಿಗೆ ವಾರ್ಡ್ ಕಟ್ಟಡವು ಮಳೆಯಿಂದ ಸೋರುತ್ತಿದೆ. ಅಲ್ಲಿಯೇ ವಿದ್ಯುತ್ ಸಂಪರ್ಕದ ಪಾಯಿಂಟ್ ಗಳು ಇವೆ. ಅಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಈ ಬಗ್ಗೆಯೂ ದೂರು ದಾಖಲಿಸಿಕೊಂಡಿದ್ದೇವೆ. ಅದೇರೀತಿ ಅಬಕಾರಿ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಕಚೇರಿಯಲ್ಲೆ ಇರಲಿಲ್ಲ. ಬೆಳಗಾವಿ‌ ಮಹಾನಗರ ಪಾಲಿಕೆಯಲ್ಲಿ ಬಹಳಷ್ಟು ಅರ್ಜಿಗಳ ವಿಲೇವಾರಿ ಆಗಿಲ್ಲ. ಈ ಬಗ್ಗೆಯೂ ತ್ವರಿತವಾಗಿ ಕ್ರಮ ವಹಿಸುವಂತೆ ಸೂಚಿಸಿದ್ದೇವೆ ಎಂದರು.