ಜೂನ್ ತಿಂಗಳ ಮೂರನೇ ವಾರಕ್ಕೆ ಕಾಲಿಟ್ಟರೂ ಕೂಡ ಮುಂಗಾರು ಮಳೆಯ ಆಗಮನವಿಲ್ಲ. ಮೇ ತಿಂಗಳಲ್ಲಿ ಆಗಬೇಕಾದ ಮಳೆಯೂ ಕೈಕೊಟ್ಟಿದ್ದರಿಂದ ಜಲಾಶಯಗಳಲ್ಲಿ ನೀರಿನ ತೀವ್ರ ಅಭಾವ ಕಾಡುತ್ತಿದೆ. ಅದರಲ್ಲಿ ಬೆಳಗಾವಿ ನಗರದ ಪ್ರಮುಖ ನೀರಿನ ಮೂಲವಾಗಿರುವ ರಾಕಸಕೊಪ್ಪ ಜಲಾಶಯವು ಪ್ರಸ್ತುತ ತೀವ್ರವಾಗಿ ನಿರಿನ ಕೊರತೆಯನ್ನು ಎದುರಿಸುತ್ತಿದ್ದು, ಜಲಾಶಯದಲ್ಲಿ ಕೇವಲ ಅರ್ಧ ಅಡಿ ನೀರು ಸಂಗ್ರಹ ಮಾತ್ರವಿದೆ. ಆದ್ದರಿಂದ ನಗರಕ್ಕೆ ನೀರಿನ ಪೂರೈಕೆಯಲ್ಲಿ ತೀವ್ರ ತೊಂದರೆಯಾಗಿದೆ.
ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯನ್ನು ತಪ್ಪಿಸಲು ಸುಮಾರು 50 ಅಶ್ವಶಕ್ತಿಯ ಎರಡು ಮೋಟಾರಗಳನ್ನು ಬಳಸಿ, ಜಲಾಶಯದ ಡೆಡ್ಸ್ಟಾಕನಲ್ಲಿ ಇರುವ ಹೆಚ್ಚುವರಿ ನೀರನ್ನು ಎತ್ತಿ ಸರಬರಾಜು ಮಾಡಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಯಥೇಚ್ಛವಾಗಿ ಪೂರೈಕೆಯಾಗುತ್ತಿದ್ದರಿಂದ ನೀರಿನ ಕೊರತೆ ಇರಲಿಲ್ಲ. ಆದರೆ, ಈ ವರ್ಷ ಜೂನ್ ಮಧ್ಯದವರೆಗೆ ಮಳೆಯಾಗದ ಕಾರಣ ನೀರಿನ ಸಂಗ್ರಹದಲ್ಲಿ ಕುಸಿತ ಉಂಟಾಗಿದ್ದು, ನಗರವಾಸಿಗಳಿಗೆ ತೀವ್ರ ನೀರಿನ ಸಮಸ್ಯೆ ಉಂಟಾಗಿದೆ. ಸದ್ಯ ನಗರ ಹಾಗೂ ಹೊರವಲಯಕ್ಕೆ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಕೆಲ ಪ್ರದೇಶಗಳ ಜನರು ನೀರಿಗಾಗಿ ಇನ್ನಷ್ಟು ಕಾಲ ಕಾಯಬೇಕಾಗಬಹುದು.
ರಾಕಸಕೊಪ್ಪ : 2019 ರಲ್ಲಿ ನಗರ ನೀರು ಸರಬರಾಜು ಮಂಡಳಿಯು ಇತಿಹಾಸದಲ್ಲಿ ಪ್ರಥಮ ಬಾರಿಗೆ ಡೆಡ್‌ಸ್ಟಾಕ್‌ನಿಂದ ನೀರನ್ನು ಪೂರೈಸಲು ಮೂರು ವಿದ್ಯುತ್ ಪಂಪಗಳನ್ನು ಬಳಸಿ 6 ಅಡಿ ನೀರನ್ನು ಪಂಪ್ ಮಾಡಿತು.
ಹಿಡಕಲ್‌ನಲ್ಲೂ ನೀರು ಗಣನೀಯವಾಗಿ ಕುಸಿದಿದೆ.
ನೀರಿನ ಮಟ್ಟ ಕಡಿಮೆಯಿದ್ದರೂ, ಡೆಡ್‌ಸ್ಟಾಕ್‌ನಲ್ಲಿ ನೀರಿನ ಕೊರತೆ ಇಲ್ಲ. ಕನಿಷ್ಠ 10-15 ದಿನಗಳವರೆಗೆ ಸುಗಮವಾಗಿ ನಗರದ ಜನತೆಗೆ ಕುಡಿಯುವ ನೀರು ಪೂರೈಸಬಹುದು ಎಂದು ಮೂಲಗಳು ತಿಳಿಸಿವೆ. ಕುಡಿಯುವ ನೀರಿಗಾಗಿ ವರುಣ ದೇವ ಕೃಪೆ ತೋರಿದರೆ ಮಾತ್ರ ಬೆಳಗಾವಿಗರ ನೀರಿನ ಬವಣೆ ತಪ್ಪಲಿದೆ.