ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಚಿಕ್ಕಬಾಗೇವಾಡಿ ಗ್ರಾಮದ ಬಳಿ ನಡೆದಿದೆ.
ಮೃತಪಟ್ಟವರನ್ನು ಹಿರೇಬಾಗೇವಾಡಿ ಗ್ರಾಮದ ಅನಿಸ್ ಮುಸ್ತಾಕ ಸೈಯದ್ (ಕಾರ್ ಚಾಲಕ– 30), ಇವರ ಪತ್ನಿ ಅಯಿಮಾನ ಅನಿಸ್ ಸೈಯದ್ (24) ಇವರಿಬ್ಬರ ಮಗು ಅಹ್ಮದ್ ಅನಿಸ್ ಸೈಯದ್ (1.5) ಮೃತಪಟ್ಟವರು. ಅನಿಸ್ ಅವರ ಹಸೋದರಿ ಆಯಿಷಾ ಅನ್ವರ ಸೈಯದ್ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಐವರು ಗೋಕಾಕದಿಂದ ಹಿರೇಬಾಗೇವಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಒಂದು ಕಾರು ಇನ್ನೊಂದನ್ನು ಹಿಂದಿಕ್ಕುವ ಭರದಲ್ಲಿ ಮೃತರ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರಿನಲ್ಲಿ ಸವದತ್ತಿ ಪರಸಗಡ ಕ್ಷೇತ್ರದ ಮಾಜಿ ಶಾಸಕ ಆರ್.ವಿ. ಪಾಟೀಲ ಅವರ ಕಾರು ಎಂದು ತಿಳಿದು ಬಂದಿದೆ. ಇದರಲ್ಲಿದ್ದ ಮಾಜಿ ಶಾಸಕರ ಪುತ್ರ ಹಾಗೂ ಇನ್ನೊಬ್ಬ ಪ್ರಯಾಣಿಕನಿಗೂ ಗಾಯಗಳಾಗಿವೆ.
ಡಿಕ್ಕಿ ರಭಸಕ್ಕೆ ಅನಿಸ್ ಅವರ ಕಾರು ದೂರ ಚಿಮ್ಮಿ ರಸ್ತೆ ಬದಿಯ ಹೊಲದಲ್ಲಿ ಬಿದ್ದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಧಾವಿಸಿದ ಜನ ಶವಗಳನ್ನು ಹೊರತೆಗೆಯಲು ಸಹಕರಿಸಿದರು. ಹಿರೇಬಾಗೇವಾಡಿ ಮತ್ತು ಬೈಲಹೊಂಗಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮುಖಾಮುಖಿ ಕಾರು ಡಿಕ್ಕಿ ಸ್ಥಳದಲ್ಲಿಯೇ ಬಾಲಕ, ದಂಪತಿ ಸಾವು
