ಬೆಳಗಾವಿ: ರಾಜ್ಯದ ಅನೇಕ ಕಡೆಗಳಲ್ಲಿ ನವಜಾತ ಶಿಶುಗಳ ಪತ್ತೆ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಹೆತ್ತವರೇ ಅನೇಕ ಕಡೆಗಳಲ್ಲಿ ತಿಪ್ಪೆಗುಂಡಿ, ರಸ್ತೆ ಹಾಗೂ ನಿರ್ಜನ ಪ್ರದೇಶದಲ್ಲಿ ಶಿಶುಗಳನ್ನು ಬಿಸಾಡಿ ಹೋಗುತ್ತಾರೆ. ಆದರೇ ಇದೇ ಮೊದಲ ಬಾರಿಗೆ ನವಜಾತ ಶಿಶುವಿಗೆ ಜನ್ಮ ನೀಡಿದ್ದ ಪ್ರೇಮಿಗಳ ಮೇಲೆ ಕೊಲೆ ಕೇಸ್ ದಾಖಲಿಸಿ, ಆರೋಪಿಗಳಿಗೆ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಮನೆಯೊಂದರ ಪಕ್ಕದ ತಿಪ್ಪೆಗುಂಡಿಯಲ್ಲಿ ಇದೇ ಮಾರ್ಚ್ 5ರಂದು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು.
ಇದೇ ಗ್ರಾಮದ ಮಹಾಬಳೇಶ ಕಾಮೋಜಿ ಹಾಗೂ ಹಾಗೂ ಸಿಮ್ರನ್ ಮಾಣಿಕಬಾಯಿ ಎಂಬ ಅನ್ಯ ಧರ್ಮೀಯ ಯುವಕ, ಯುವತಿ ನಡುವೆ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸ್ವಲ್ಪ ದಿನದಲ್ಲಿಯೇ ಸಲುಗೆ ಬೆಳದಿದ್ದು, ಇಬ್ಬರು ಪರಸ್ಪರ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಕಳೆದ ವರ್ಷ ಸಿಮ್ರನ್ ಗರ್ಭಿಣಿಯಾಗಿದ್ದು, ಆಕೆ ದಪ್ಪ ಇದ್ದಿದ್ದರಿಂದ ಈ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ ಮಾರ್ಚ್ 5ರಂದು ಸಿಮ್ರನ್ ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮನೆಯಲ್ಲಿ ಬಾತ್ ರೂಂ ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಗುವನ್ನು ತಿಪ್ಪೆಗುಂಡಿಯ ಬಳಿ ಬಿಸಾಡಲಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಕಿತ್ತೂರು ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ನವಜಾತ ಶಿಶುವಿನ ತಲೆಗೆ ಗಾಯವಾಗಿ, ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿಯೂ ಈ ಬಗ್ಗೆ ವೈದ್ಯರು ಉಲ್ಲೇಖಿಸಿದ್ದರು. ಪ್ರಕರಣ ಬೆನ್ನಿತ್ತಿದ್ದ ಪೊಲೀಸರು ಅಕ್ಕ, ಪಕ್ಕದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಹೋಗಿ ಗರ್ಭಿಣಿಯರು ಚಿಕಿತ್ಸೆ ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಅನುಮಾನ ಮೇಲೆ ಸಿಮ್ರನ್ ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಆರೋಪಿಗಳ ಕೃತ್ಯ ಬಯಲಾಗಿದೆ.
ಕಳೆದ 5-6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸಿಮ್ರನ್ ಹಾಗೂ ಮಹಾಬಳೇಶ ಮಗುವಿಗೆ ಜನ್ಮ ನೀಡಿದ್ದರು. ಇಬ್ಬರು ಅಂಬಡಗಟ್ಟಿಯ ಒಂದೇ ಓಣಿಯ ನಿವಾಸಿಗಳಿದ್ದಾರೆ. ಜೊತೆಗೆ ಬೇರೆ ಬೇರೆ ಧರ್ಮೀಯರಾಗಿದ್ದು, ಕೃತ್ಯವನ್ನು ಮುಚ್ಚಿಡಲು ಸಹ ಯತ್ನಿಸಿದ್ದರು. ಇದು ಯಾರಿಗೂ ಗೊತ್ತಾಗಬಾರದು ಎಂದು ಈ ರೀತಿ ಮಾಡಿದ್ದರು. ಹೆರಿಗೆ ಸಂದರ್ಭದಲ್ಲಿ ಮಹಾಬಳೇಶ್ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದರು ಎಂದು ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ರಾಜ್ಯದ ಅನೇಕ ಕಡೆಗಳಲ್ಲಿ ನವಜಾತ ಶಿಶುಗಳು ಪತ್ತೆ ಆಗುತ್ತವೆ. ಆದರೇ ಇದಕ್ಕೆ ಯಾವುದೇ ತಾರ್ಕಿಕ ಅಂತ್ಯ ಸಿಗುವುದಿಲ್ಲ. ಆದರೆ, ಅಂಬಡಗಟ್ಟಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ಮೇಲೆ ಕೊಲೆ ಪ್ರಕರಣ ಸಹ ದಾಖಲು ಮಾಡಿದ್ದಾರೆ. ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಇನ್ನೇರಡು ತಿಂಗಳಲ್ಲಿ ಸಿಮ್ರನ್ ಮದುವೆ ಮಾಡಲು ಸಹ ಪೋಷಕರು ತಯಾರಿ ನಡೆಸಿದ್ದರು ಎನ್ನುವುದು ಗೊತ್ತಾಗಿದೆ. ಇಬ್ಬರು ಪ್ರೀತಿಸುತ್ತಿದ್ದರು. ದೈಹಿಕ ಸಂಪರ್ಕ ಬೆಳೆಸಿದ್ದು, ಅವರ ಸ್ವಇಚ್ಛೆ. ಆದರೆ, ಪ್ರಪಂಚವನ್ನೆ ನೋಡದಿರುವ ಶಿಶುವನ್ನು ಧಾರುಣವಾಗಿ ಹತ್ಯೆ ಮಾಡಿದ್ದು ಮಾತ್ರ ಮಹಾಪಾಪ. ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ತಾಯಿ ಪತ್ತೆ ಹಚ್ಚುವುದು ಬಹಳ ಕಷ್ಟ. ಆದರೆ, ಕಿತ್ತೂರು ಪೊಲೀಸರು ತುಂಬಾ ಕಾಳಜಿ ವಹಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ದುರಾದೃಷ್ಟ ಪ್ರಕರಣವಾದರೂ ಕೂಡ ಆ ಮುಗ್ದ ಮಗುವಿನ ಸಾವಿಗೆ ಪೊಲೀಸರು ನ್ಯಾಯ ಒದಗಿಸಿದ್ದಾರೆ ಎಂದು ಡಾ.ಭೀಮಾಶಂಕರ ಗುಳೇದ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ರೀತಿ ನವಜಾತ ಶಿಶುಗಳ ಹತ್ಯೆ ವಿಚಾರದಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಬೆಳಗಾವಿ ಪೊಲೀಸರು ಇಡೀ ರಾಜ್ಯಕ್ಕೆ ಮಾದರಿ ಆಗಿದ್ದಾರೆ.
ನವಜಾತ ಶಿಶು ತಿಪ್ಪೆಗೆಸೆದ ಪ್ರೇಮಿಗಳ ವಿರುದ್ದ ಕೊಲೆ ಪ್ರಕರಣ
