ಬೆಳಗಾವಿ: ಪ್ರೇಯಸಿಯನ್ನು ಹತ್ಯೆ ಮಾಡಿ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಶಹಾಪುರದ ನಾಥಪೈ ಸರ್ಕಲ್ ನಲ್ಲಿ ಇಂದು ಸಾಯಂಕಾಲ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮದ ಪ್ರಶಾಂತ ಕುಂಡೇಕರ್ (29), ಐಶ್ವರ್ಯ ಲೋಹಾರ ಮೃತ ದುರ್ದೈವಿಗಳು. ಮೃತರ ಆಕ್ರಂದನ ಮುಗಿಲು ಮುಟ್ಟಿದೆ.
ಯುವತಿಯ ಚಿಕ್ಕಮ್ಮನ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಪ್ರೇಯಸಿ ಐಶ್ವರ್ಯಗೆ ಮೊದಲು ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತನ್ನ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಒಂದು ವರ್ಷದಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ವೃತ್ತಿಯಲ್ಲಿ ಪ್ರಶಾಂತ ಕುಂಡೇಕರ್ ಪೇಂಟರ್ ಆಗಿದ್ದ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಇದೊಂದು ಬಹಳ ಕೆಟ್ಟ ಘಟನೆ ಆಗಿದೆ. ಐದು ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇಬ್ಬರೂ ಸತ್ತಿದ್ದಾರೆ. ಹುಡುಗ ಮತ್ತು ಹುಡುಗಿಯ ನಡುವೆ ಪ್ರೇಮವಿತ್ತು. ಹುಡುಗ ಮದುವೆಗೆ ಒತ್ತಾಯಿಸುತ್ತಿದ್ದ.
ಚನ್ನಾಗಿ ಕೆಲಸ ಮಾಡಿ ಸಂಬಳ ಜಾಸ್ತಿ ಮಾಡಿಕೊ ಎಂದು ಹುಡುಗಿ ತಾಯಿ ಹೇಳಿದ್ದರು. ಆದರೂ, ಹುಡುಗ ಹುಡುಗಿಗೆ ಮದುವೆ ಮಾಡಿಕೊಳ್ಳೋಣ ಎಂದು ಒತ್ತಾಯಿಸಿದ್ದಾನೆ. ಇಂದು ಬರುವಾಗ ಜೊತೆಗೆ ವಿಷದ ಬಾಟಿಲು ಕೂಡ ತಂದಿದ್ದ. ಮೊದಲು ಹುಡುಗ ಚಾಕುವಿನಿಂದ ಇರಿದಿದ್ದಾನೆ. ನಂತರ ಕುತ್ತಿಗೆ ಕುಯ್ದುಕೊಂಡು ಹುಡುಗನೂ ಸಹ ತೀರಿ ಹೋಗಿದ್ದಾನೆ.
ಹುಡುಗ ಪೇಂಟಿಂಗ್ ಮಾಡ್ತಿದ್ದ. ಕೊಲೆ ನಡೆದಿರುವುದು ಹುಡುಗಿಯ ಚಿಕ್ಕಮ್ಮನ ಮನೆಯಲ್ಲಿ. ಕೊಲೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹುಡುಗ ಯಳ್ಳೂರು ಗ್ರಾಮದವ. ಒಂದೂವರೇ ವರ್ಷದಿಂದ ಪ್ರೀತಿಸುತ್ತಿದ್ದರು. ಹುಡುಗಿಯೂ ಸಹ ಮೇಜರ್ ಇದ್ದಾರೆ ತನಿಖೆ ಮಾಡುತ್ತೇವೆ ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.