ಬೆಳಗಾವಿ: ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಭಕ್ತರು ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾಗಿದ್ದಾರೆ. ದಕ್ಷಿಣ ಕಾಶಿ ಅಂತಾನೇ ಪ್ರಖ್ಯಾತಿ ಪಡೆದಿರುವ ಬೆಳಗಾವಿಯ‌ ಕಪಿಲೇಶ್ವರ ಮಂದಿರಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.

ದಕ್ಷಿಣ ಭಾರತದಲ್ಲಿ ಭಾವುಕರ ಭೂಕೈಲಾಸ ಅಂತಲೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ದೇವಸ್ಥಾನದಲ್ಲಿ
ರಾತ್ರಿ 12 ಗಂಟೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶಿವಲಿಂಗ ಮೂರ್ತಿಗೆ ಅಭಿಷೇಕ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಬಿಲ್ವಪತ್ರೆ ಅರ್ಪಣೆ ಮಾಡಲಾಯಿತು.
ಪಲ್ಲಕ್ಕಿ ಉತ್ಸವ, ಬಳಿಕ ಮಹಾ ಆರತಿ ಕಾರ್ಯಕ್ರಮ ಸೇರಿ ವಿವಿಧ ಧಾರ್ಮಿಕ‌ ವಿಧಿ ವಿಧಾನಗಳನ್ನು ಅರ್ಚಕರು ನೆರವೇರಿಸಿದರು. ಶಿವರಾತ್ರಿ ಹಿನ್ನೆಲೆ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಆಡಳಿತ ಮಂಡಳಿ ಶೃಂಗರಿಸಿದೆ.

ಬೆಳಗಿನ ಜಾವದಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ದೇವರ ದರ್ಶನಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲು ನಿರ್ಮಿಸಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಕಪಿಲೇಶ್ವರನಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ಇನ್ನು ಹರ ಮತ್ತು ಹರಿ ಮೂರ್ತಿ ಪರಸ್ಪರ ಮುಖಾಮುಖಿಯಾಗಿ ಸ್ಥಾಪನೆಗೊಂಡ ಭಾರತದ ಏಕೈಕ ದೇವಸ್ಥಾನ ಎಂಬ ಹೆಗ್ಗಳಿಕೆ ಕಪಿಲೇಶ್ವರಕ್ಕಿದೆ. 1500ನೇ ಇಸ್ವಿಯಲ್ಲಿ ಕಪಿಲ ಮುನಿಗಳ ತಪ್ಪಸ್ಸಿನ ಶಕ್ತಿಯಿಂದ ಶಿವಲಿಂಗ ಮೂರ್ತಿ ಉದ್ಭವವಾಗಿದೆ ಎಂಬ ಪ್ರತೀತಿ ಇದೆ. ಹೀಗಾಗಿ ಉತ್ತರದ ಕಾಶಿನಾಥ ದೇವಸ್ಥಾನದಷ್ಟೇ ಮಹತ್ವ ಬೆಳಗಾವಿಯ ಈ ಕಪಿಲೇಶ್ವರ ದೇವಸ್ಥಾನಕ್ಕಿದೆ. ಕಪಿಲೇಶ್ವರನ‌ ದರ್ಶನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ವಿಶೇಷ.