ಬೆಳಗಾವಿ: ಜಮೀನು ವಿವಾದ ಹಿನ್ನೆಲೆ ಎರಡು ಕುಟುಂಬಗಳು ಕಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿರುವ ಸಾಗವಾನಿ ಮರ ಕಡಿದ ಹಿನ್ನೆಲೆಯಲ್ಲಿ ಗ್ರಾಮದ ಮಹಾರುದ್ರಪ್ಪ ಕುಂಬಾರ ಮತ್ತು ಶಂಕರೆಪ್ಪ ಕುಂಬಾರ ಕುಟುಂಬಸ್ಥರು ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಎರಡೂ ಕುಟುಂಬಗಳು ಸಂಬಂಧದಲ್ಲಿ ಸಹೋದರರಾಗಿದ್ದಾರೆ.
ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದಿದ್ದರು. ಕಡಿದ ಸಾಗುವಾನಿ ಮರಗಳನ್ನು ಒಯ್ಯಲು ಬಂದಾಗ ಈ ಗಲಾಟೆ ನಡೆದಿದೆ. ಎರಡು ಕುಟುಂಬಗಳ ಮಧ್ಯೆ ತೀವ್ರ ವಾಗ್ವಾದ ನಡೆದು, ಹೊಡೆದಾಟ ಆರಂಭವಾಗಿದೆ. ಕೈಯಲ್ಲಿ ದೊಣ್ಣೆ ಹಿಡಿದು ಒಬ್ಬರಿಗೊಬ್ಬರು ಮನಬಂದಂತೆ ಬಡಿದಾಡಿಕೊಂಡಿದ್ದಾರೆ.
ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕುಟುಂಬ ಸದಸ್ಯರಿಗೂ ಗಾಯವಾಗಿದ್ದು, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.