ಬೆಳಗಾವಿ: ಕಳೆದ 20 ವರ್ಷಗಳ ಹಿಂದೆ ಪ್ರಾರಂಭವಾದ ಹರ್ಷಾ ಹೊಟೇಲ ಇಂದು ಅತ್ಯಾಧುನಿಕ ಶೈಲಿಯೊಂದಿಗೆ ನವೀಕೃತಗೊಂಡು ಅತ್ಯಂತ ಸೌಂದರ್ಯದಿಂದ ಕೂಡಿ ಗ್ರಾಹಕರ ನೆಚ್ಚಿನ ತಿನಿಸು ಕೇಂದ್ರವಾಗಿದೆ. ಈ ನವಿಕೃತ ಹೊಟೇಲ ಇಂದು ಜನಸೇವೆಗೆ ಅರ್ಪಣೆಗೊಂಡಿದೆ.
ಆಟೋ ನಗರದಲ್ಲಿ ನವೀಕರಣಗೊಂಡಿರುವ ಶುದ್ಧ ಶಾಕಾಹಾರಿ ಹರ್ಷಾ ರೆಸ್ಟೊರೆಂಟ್ ಅನ್ನು ಗುರುವಾರ ಜನಸೇವೆಗೆ ಅರ್ಪಿಸಿ ಮಾತನಾಡಿದ ಬೆಳಗಾವಿ ಉತ್ತರದ ಮಾಜಿ ಶಾಸಕ ಫಿರೋಜ ಸೇಟ್ ಅವರು, ಪ್ರತಿದಿನ ಸುಮಾರು 200 ಕೋಟಿ ರೂ. ವ್ಯವಹಾರ ನಡೆಸುತ್ತಿರುವ ಹೊಟೇಲ್ ಉದ್ಯಮ ದೇಶದ ಆರ್ಥಿಕತೆಗೂ ಗಮನಾರ್ಹವಾದ ಕೊಡುಗೆ ನೀಡುತ್ತಿದ್ದು, ಲಕ್ಷಾಂತರ ಜನರಿಗೆ ಬದುಕನ್ನು ನೀಡಿದೆ ಎಂದ ಅವರು, ನವೀಕರಣ ಅತ್ಯಂತ ಸೌಂದರ್ಯಭರಿತವಾಗಿದೆ. ಇದು ಗ್ರಾಹಕರ ಅಚ್ಚುಮೆಚ್ಚಿನ ಉಪಹಾರಗೃಹವಾಗಲಿದೆ. ಗ್ರಾಹಕರ ಹಿತರಕ್ಷಣೆಯೇ ಒಂದು ಉದ್ಯಮದ ಯಶಸ್ಸು ಎಂದು ಹೇಳಿದರು.
ಬೆಳೆಯುತ್ತಿರುವ ಬೆಳಗಾವಿಗೆ ಪೂರಕವಾಗಿ ಹೊಟೇಲ್ ಉದ್ಯಮವೂ ಬೆಳೆಯಬೇಕು. ಬೆಳಗಾವಿ ಎಲ್ಲಾ ರೀತಿಯಲ್ಲೂ ಪ್ರಮುಖ ವಾಣಿಜ್ಯ ಮತ್ತು ಔದ್ಯಮಿಕ ಕ್ಷೇತ್ರವಾಗಿದೆ. ಪ್ರತಿನಿತ್ಯ ಬಂದು ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರಿಗೆ ಸರಿಯಾದ ಆತಿಥ್ಯ ಹೊಟೇಲ್ ಉದ್ಯಮ ನೀಡುವುದರಿಂದ ಬೆಳಗಾವಿ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದರು.
ಹರ್ಷಾ ಹೊಟೇಲ್ ಮಾಲಿಕರಾದ ಸುರೇಶ ನಾಯಿರಿ ಅವರು ಈಗಾಗಲೇ ಮೂರು ಹೊಟೇಲ್ ಹೊಂದಿದ್ದು, ಪ್ರತಿ ಹೊಟೇಲಿನಲ್ಲಿ ಕೂಡ ಗ್ರಾಹಕರ ಆರೋಗ್ಯದ ಹಿತದೃಷ್ಟಿಯನ್ನು ಇಟ್ಟುಕೊಂಡು ಅವರ ಅಭಿರುಚಿಗೆ ತಕ್ಕಂತೆ ಶುಚಿ – ರುಚಿಯ ಕಡೆಗೆ ಹೆಚ್ಚು ಗಮನ ಹರಿಸುತ್ತ ಬಂದಿದ್ದಾರೆ. ಹಾಗಾಗಿ ಸುರೇಶ್ ಅವರು ಹೊಟೇಲ್ ನಡೆಸುತ್ತಿರುವ ಶೈಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಬಹುತೇಕ ಉದ್ಯಮಗಳು ಸ್ವಾರ್ಥದಿಂದ ಕೂಡಿದೆ. ಹೊಟೇಲ್ ಉದ್ಯಮ ಸ್ವಾರ್ಥ ಮತ್ತು ನಿಸ್ವಾರ್ಥದ ಸಮ್ಮಿಶ್ರಣವಾಗಿವೆ. ಇಲ್ಲಿ ಗಳಿಕೆಯ ಜೊತೆಗೆ ಸೇವೆಯೂ ಅಡಗಿದೆ. ಹಸಿದು ಬಂದವರಿಗೆ ಅನ್ನವನ್ನು ನೀಡುವುದು ಶ್ರೇಷ್ಠ ಕಾಯಕ. ಶುದ್ಧ ಆಹಾರ ಸೇವನೆಯಿಂದ ದೇಹ ಮತ್ತು ಮನಸ್ಸು ಕೂಡ ಶುದ್ಧವಾಗಿರುತ್ತದೆ ಎಂದರು.
ಕಾರಂಜಿ ಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಉದ್ಯಮಿ ಸುರೇಶ ನಾಯಿರಿ ಅವರದು ಸಾತ್ವಿಕ ವ್ಯಕ್ತಿತ್ವ. ಗ್ರಾಹಕರ ಆರೋಗ್ಯ ಅವರಿಗೆ ಮುಖ್ಯ. ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡುತ್ತ, ಹಲವು ವರ್ಷಗಳಿಂದ ಈ ಉದ್ಯಮ ನಡೆಸಿಕೊಂಡು ಬಂದಿರುವ ಸುರೇಶ ಗ್ರಾಹಕರ ಹಿತದೃಷ್ಟಿಯನ್ನು ಕಾಯ್ದುಕೊಂಡಿದ್ದಾರೆ. ಕಾಯಕವೇ ಅವರ ಮೂಲ ಮಂತ್ರವಾಗಿಟ್ಟುಕೊಂಡಿದ್ದಾರೆ. ಕಾಯಕದಿಂದಲೇ ಇಷ್ಟು ಎತ್ತರಕ್ಕೆ ಎರಿದ್ದಾರೆ. ಹೊಟೇಲ್ ಉದ್ಯಮಕ್ಕೆ ಬರುವವರಿಗೆ ಮಾದರಿಯಾಗಿ ನಿಂತಿದ್ದಾರೆ ಎಂದು ನುಡಿದರು.
ಹೊಟೇಲ್ ಉದ್ಯಮಿ ವಿಠ್ಠಲ ಹೆಗಡೆ ಮಾತನಾಡಿ, ಹೊಟೇಲ್ ಉದ್ಯಮ ತುಂಬಾ ಸವಾಲಿನದು. ಅಲ್ಲಿ ಸ್ಥಿರವಾಗಿ ನೆಲೆ ನಿಂತವರು ಮಾತ್ರ ಸಾಧಕರಾಗುತ್ತಾರೆ. ಸುರೇಶ್ ಅವರು ಕಳೆದ ನಲವತ್ತು ವರ್ಷಗಳಿಂದ ಉದ್ಯಮದಲ್ಲಿದ್ದವರು. ಅನೇಕ ಏಳು-ಬೀಳುಗಳನ್ನು ಕಂಡವರು. ಯಾವುದಕ್ಕೂ ಹಿಂಜರಿಯದೇ ತನ್ನ ಪರಿಶ್ರಮ ಮತ್ತು ಹೋರಾಟದ ಮೂಲಕವೇ ಉತ್ತರ ಕೊಟ್ಟವರು ಎಂದ ಅವರು, ಇಪ್ಪತ್ತು ವರ್ಷಗಳ ಹಿಂದೆ ನಾನು ಇದೇ ಹೊಟೇಲ್ ಉದ್ಘಾಟನೆ ಮಾಡಿದೆ. ಇಂದು ಈ ಹೊಟೇಲಿನ ನವೀಕರಣವು ಬೆಳಗಾವಿ ಹೊಟೇಲ್ ಮುಕುಟವಾಗಿದೆ. ಅಷ್ಟು ಸುಂದರವಾಗಿ ನವೀಕರಿಸಲಾಗಿದೆ. ಪರಿಶ್ರಮ ಜೀವಿಯಾದ ಸುರೇಶ್ ಅವರು ಈಗ ಬೆಳಗಾವಿ ಹೊಟೇಲ್ ಉದ್ಯಮದಲ್ಲಿ ನೆನೆಯತಕ್ಕ ಉದ್ಯಮಿಯಾಗಿ, ಎಲ್ಲರಿಗೂ ಮಾದರಿಯಾಗಿ ಬೆಳೆದಿದ್ದಾರೆ. ಒಂದು ನಗರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹೊಟೇಲ್ ಉದ್ಯಮ ಪ್ರಮುಖ ಪಾತ್ರವಹಿಸುತ್ತದೆ. ಸರ್ಕಾರ ಹೊಟೇಲ್ ಉದ್ಯಮದ ಉನ್ನತೀಕರಣಕ್ಕೆ ಹೆಚ್ಚು ಗಮನ ಕೊಡಬೇಕು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲೀಕರಾದ ಎನ್. ಎಸ್. ಚೌಗುಲೆ, ರಾಮತೀರ್ಥ ನಗರದ ನಗರ ಸೇವಕರಾದ ಹನಮಂತ ಕೊಂಗಾಲಿ, ಬೆಳಗಾವಿ ಹೊಟೇಲ್ ಸಂಘದ ಅಧ್ಯಕ್ಷರ ಶ್ರೀ ಅಜಯ್ ಪೈ, ಹರ್ಷಾ ಹೊಟೇಲ್ ವಿನ್ಯಾಸಕ ಆನಂದ ರಾಯಕರ್, ಕೆಐಎಡಿಬಿ ಅಧ್ಯಕ್ಷ ಸುರೇಶ್ ಯಾದವ, ನಿವೃತ್ತ ಅರಣ್ಯಾಧಿಕಾರಿಗಳಾದ ಕೆ. ಸಂಜೀವ ನಾಯಿರಿ, ಮಾಜಿ ಮೇಯರ್ ಎನ್.ಬಿ. ನಿರ್ವಾಣಿ ಇತರರು ಇದ್ದರು. ಹರ್ಷಾ ರೆಸ್ಟೊರೆಂಟ್ ಮಾಲೀಕ ಸುರೇಶ ನಾಯಿರಿ ಸ್ವಾಗತಿಸಿದರು. ಡಾ. ನಾರಾಯಣ ನಾಯ್ಕ ನಿರೂಪಿಸಿದರು.