ಬೆಳಗಾವಿ: ಅಭಿವೃದ್ದಿಯಲ್ಲಿ ತೀವ್ರವಾಗಿ ಹಿಂದುಳಿದಿದ್ದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಉದ್ದೇಶವನ್ನಿಟ್ಟಕೊಂಡು ನಿರ್ಮಿಸಿದ ಸುವರ್ಣ ವಿಧಾನಸೌಧ ಈ ಭಾಗದ ಗಂಭೀರ ಸಮಸ್ಯೆಗಳಿಗೆ ಸ್ಫಂಧಿಸಿದಿಯಾ ? ಅದರ ಮೂಲ ಉದ್ದೇಶ ಕಾಣಿಸುತ್ತಿಲ್ಲವೇಕೆ ? ಎಂಬಂತಹ ಹಲವಾರು ಪ್ರಶ್ನೆಗಳು ಉತ್ತರ ಕರ್ನಾಟಕದ ಜನರ ಸ್ಮೃತಿಪಟಲದಲ್ಲಿ ಸದಾ ಗುಣಗುಣಿಸುತ್ತಿದೆ.
ಪ್ರಮುಖ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿರುವದರಿಂದ ಮೇಲಿಂದ ಮೇಲೆ ಪ್ರತ್ಯೇಕ ರಾಜ್ಯದ ಕೂಗು ಅಲ್ಲಲ್ಲಿ ಕೇಳಿ ಬರುತ್ತಲೇ ಇದೆ. ದಕ್ಷಿಣಕ್ಕೆ ಹೋಲಿಸಿದರೆ ಹೇರಳವಾದ ಸಂಪನ್ಮೂಲ ಹೊಂದಿದ್ದರೂ ಕೂಡ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಡಾ ಡಿ ಎಂ ನಂಜುಂಡಪ್ಪ ವರದಿಯ ಸಂಪೂರ್ಣ ಅನುಷ್ಠಾನ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ, ಕೃಷ್ಣ ಮೇಲ್ದಂಡೆ ಯೋಜನೆ ನೀರಿನ ಪೂರ್ಣ ಬಳಕೆ, ಆಲಮಟ್ಟಿ ಆಣೆಕಟ್ಟು ಎತ್ತರ, ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆ, ಕಳಸಾ ಬಂಡೂರಿ ಅನುಷ್ಠಾನ, ಗಡಿ ವಿವಾದ, ಕಬ್ಬು ಬೆಳೆಗಾರರ ಸಂಕಷ್ಟ, ಸೇರಿದಂತೆ ಹಲವು ಸಮಸ್ಯೆಗಳು ಹಾಗೆಯೇ ಉಳಿದಿವೆ. ಇದರಿಂದ ಆಳುವ ಸರಕಾರವನ್ನು ಅನುಮಾನದಿಂದಲೇ ನೋಡುತ್ತಾರೆ ಇಲ್ಲಿನ ಜನರು.
ಸುವರ್ಣ ವಿಧಾನಸೌಧ ನಿರ್ಮಿಸಿದ ಸರಕಾರ ಮೂಲ ಉದ್ದೇಶವನ್ನೇ ಮರೆತಿದೆ. ಉತ್ತರದಾಯಿಯಾಗಿರಬೇಕಾದ ಮುಖ್ಯಮಂತ್ರಿಗಳಿಗೆ ಇದರ ಕುರಿತು ಅರಿವು ಕಡಿಮೆ ಇರಬಹುದು. ಸರಕಾರದ ಉದಾಸೀನ ಮನೋಭಾವದ ಪರಿಣಾಮವಾಗಿ ಈ ಭಾಗದ ಜನರಿಗೆ ನೋವಿನೊಂದಿಗೆ, ಅಸಮಾಧಾನವೂ ಇದೆ.
ಸುವರ್ಣ ವಿಧಾನಸೌಧದಲ್ಲಿ ವರ್ಷಕ್ಕೆ 10 ದಿನ ಮಾಡುವ ಅಧಿವೇಶನ ಸಾರ್ಥಕವಾಗುತ್ತಿಲ್ಲ. ಪ್ರತಿ ವರ್ಷ ಹತ್ತಾರು ಕೋಟಿ ರೂ.ಗಳು ಖರ್ಚಾಗುವದು ಬಿಟ್ಟರೆ ಯಾವುದೇ ಪ್ರಗತಿ ಕಂಡುಬಂದಿಲ್ಲ. 500 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ ಸುವರ್ಣ ವಿಧಾನಸೌಧ ಮತ್ತು ಇಲ್ಲಿ ನಡೆಯುವ ಅಧಿವೇಶನದಿಂದ ಈ ಭಾಗದ ಪರಿಸ್ಥಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.
ಬೆಳಗಾವಿ ಅಧಿವೇಶನದಲ್ಲೇ ದಕ್ಷಿಣ ಕರ್ನಾಟಕದ ಶಾಸಕರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಹೊರಗಡೆ ಹತ್ತಾರು ಪ್ರತಿಭಟನೆಗಳು ನಡೆಯುತ್ತವೆ. ಮೊದಲೇ ಕಡಿಮೆ ಅವಧಿಯವರೆಗೆ ಅಧಿವೇಶನ ನಡೆಯುವದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಅವಕಾಶವೇ ಸಿಗುವದಿಲ್ಲ. ಹೀಗಾಗಿ ಈ ಭಾಗದ ಸಮಸ್ಯೆಗಳು ಮೊದಲ ಸ್ಥಾನದಲ್ಲೇ ಇವೆ. ಪ್ರತಿ ಸಲ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಇಲ್ಲಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಈ ಭಾಗದ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳು ಹೋರಾಟ ಮಾಡುವದು ನಿಜಕ್ಕೂ ವಿಪರ್ಯಾಸದ ಸಂಗತಿ.
ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತದೆಂದರೆ, ಉತ್ತರ ಕರ್ನಾಟಕ ಭಾಗದಲ್ಲಿ ಏನೋ ಒಂದು ಸಡಗರ. ಒಂದು ರೀತಿಯ ಹಬ್ಬದ ವಾತಾವರಣ. ಜನರು ಸಹ ತಮ್ಮ ಸಂಕಷ್ಟಗಳನ್ನೆಲ್ಲ ಮರೆತು ಅದಿವೇಶನವನ್ನು ಸ್ವಾಗತಿಸುವದಲ್ಲದೆ ಸರಕಾರದ ಕಡೆ ಬಹಳ ಕಾತರದಿಂದ ನೋಡುತ್ತಾರೆ. ನಮ್ಮ ಭಾಗದ ನೀರಾವರಿ, ರಸ್ತೆ, ಮೂಲಭೂತ ಸೌಲಭ್ಯ, ಆಸ್ಪತ್ರೆ, ಬಸ್ ಸೌಕರ್ಯ ಮೊದಲಾದ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೆ. ಒಂದಿಷ್ಟು ಪರಿಹಾರದ ಪ್ಯಾಕೇಜ್ ಘೋಷಣೆಯಾಗುತ್ತದೆ. ಶಾಶ್ವತ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂದು ಕಾಯುತ್ತಾರೆ. ಆದರೆ ಅಂದುಕೊಂಡಂತೆ ಯಾವುದೂ ನಡೆಯುವದೇ ಇಲ್ಲ.
ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ರಾಜಕೀಯ ಕೆಸೆರೆರಚಾಟದಲ್ಲಿ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ಯೋಜನೆ ಕಳೆದುಹೋಗಿದೆ. ಮೇಕೇದಾಟು, ಎತ್ತಿನಹೊಳೆಗೆ ಸಿಗುವ ಪ್ರಾಮುಖ್ಯತೆ ಕಳಸಾ ಯೋಜನೆಗೆ ಸಿಗುತ್ತಿಲ್ಲ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅನುದಾನ ಕೊರತೆಯಿಂದ ಬಳಲುತ್ತಿದೆ. ಕಳೆದ 18 ವರ್ಷಗಳಿಂದ ನ್ಯಾಯಯುತ ಬೆಲೆಗಾಗಿ ಹೋರಾಟ ಮಾಡುತ್ತಿರುವ ಕಬ್ಬು ಬೆಳೆಗಾರರು ಇನ್ನೂ ನೆಮ್ಮದಿ ಕಂಡಿಲ್ಲ. ಸರಕಾರಿ ಆಸ್ಪತ್ರೆ, ಶಾಲೆಗಳ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಬೇಕಾದ ಸುವರ್ಣ ವಿಧಾನಸೌಧವೇ ತನ್ನ ಸಮಸ್ಯೆಗಳ ಪರಿಹಾರಕ್ಕೆ ಪರದಾಡುತ್ತಿದೆ.
ಸುವರ್ಣ ವಿಧಾನಸೌಧದಲ್ಲಿ ಸಂಪ್ರದಾಯದಂತೆ ಹಾಗೂ ಜನರಿಗೆ ಮಾತುಕೊಟ್ಟಿದ್ದೇವೆ ಎನ್ನುವಂತೆ ಸರಕಾರ 10 ದಿನಗಳ ಕಾಲ ಅಧಿವೇಶನ ನಡೆಸಿ ಕೈತೊಳೆದುಕೊಳ್ಳುತ್ತಿದೆ. ಅಲ್ಲಿಗೆ ಎಲ್ಲರ ಜವಾಬ್ದಾರಿ ಮುಗಿದಂತೆ. ಪ್ರತಿ ವರ್ಷ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆಯೇ ಹೆಚ್ಚಿನ ಚರ್ಚೆಯಾಗಬೇಕು ಎಂಬ ಒತ್ತಾಯಗಳು ಕೇಳಿಬರುತ್ತವೆ. ಅದಕ್ಕೆ ಪೂರಕವಾಗಿ ಸರಕಾರ ಅಧಿವೇಶನದ ಕೊನೆಯ ಎರಡು ದಿನ ಕಾಟಾಚಾರಕ್ಕೆ ಎನ್ನುವಂತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಲಾಪವನ್ನು ಮೀಸಲಿಡುತ್ತದೆ. ಈ ಚರ್ಚೆಯಲ್ಲಿ ಎಷ್ಟು ಜನ ಶಾಸಕರು ಭಾಗವಹಿಸುತ್ತಾರೆ. ಎಷ್ಟರಮಟ್ಟಿಗೆ ಗಂಭೀರ ಚರ್ಚೆಗಳು ನಡೆಯುತ್ತವೆ ಎಂಬುದರ ಬಗ್ಗೆ ಯಾರೂ ಆಲೋಚನೆ ಮಾಡುವದಿಲ್ಲ.
ಕಳೆದ ವರ್ಷ ಅಧಿವೇಶನದ ಮೊದಲ ವಾರದಲ್ಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಅದಕ್ಕೆ ಪರಿಹಾರ ರೂಪಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಆಗ ಸರಕಾರ ಇದಕ್ಕೆ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಕೊನೆಯ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಪ್ರಸಕ್ತ ಚಳಿಗಾಲದ ಅಧಿವೇಶನ ಹತ್ತು ದಿನಗಳ ಬದಲಾಗಿ ಒಂಬತ್ತು ದಿನಕ್ಕೆ ಕಡಿತಗೊಳಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಎರಡನೇ ವಾರ ಎಷ್ಟು ಜನ ಶಾಸಕರು ಅ„ವೇಶನದಲ್ಲಿ ಇರುತ್ತಾರೆ ಎಂಬ ಅನುಮಾನಗಳು ಮೂಡಿವೆ. ಇದೇ ಕಾರಣದಿಂದ ಅ„ವೇಶನದ ಮೊದಲ ವಾರದಲ್ಲಿ ಮೂರನೇ ದಿನದಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಬೇಕು ಎಂಬ ಬಲವಾದ ಒತ್ತಾಯಗಳು ಕೇಳಿಬಂದಿವೆ.
ಅಧಿವೇಶನದ ಮೊದಲ ವಾರದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆದರೆ ಬಹುತೇಕ ಎಲ್ಲ ಶಾಸಕರು ಕಲಾಪದಲ್ಲಿ ಭಾಗಿಯಾಗಿ ಸರಕಾರದ ಮೇಲೆ ಇಲ್ಲಿಯ ಸಮಸ್ಯೆಗಳ ಬಗ್ಗೆ ಗಮನಸೆಳೆಯಬಹುದು. ಅರ್ಥಪೂರ್ಣ ಚರ್ಚೆಯಾಗಬಹುದು. ಸರಕಾರಕ್ಕೂ ಸಹ ಇದರ ಗಂಭೀರತೆಯ ಅರಿವಾಗಬಹುದು ಎಂಬುದು ಈ ಭಾಗದ ಜನರ ನಿರೀಕ್ಷೆ.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಒಂದು ಕಡೆ ಜನಪ್ರತಿನಿಧಿಗಳು, ಹಿರಿಯ ರಾಜಕೀಯ ನಾಯಕರು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದರೆ ಇನ್ನೊಂದು ಕಡೆ ಉತ್ತರ ಕರ್ನಾಟಕದ ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳು ಸಹ ಅಧಿವೇಶದನ ಮೊದಲ ವಾರವೇ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬುದು ಜನರ ಒತ್ತಾಯ.