ಬೆಳಗಾವಿ,: ಉತ್ತರದಿಂದ ದಕ್ಷಿಣ ಕರ್ನಾಟಕದ ನಗರಗಳಿಗೆ ಶೀಘ್ರ ಸಂಪರ್ಕ ಸಾಧಿಸಲು ಅನುಕೂಲವಾಗುವ ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗದ ಯೋಜನೆಯ ಅನುಷ್ಠಾನ ಕುರಿತು ಮೇಲಿಂದ ಮೇಲೆ ಕೇವಲ ಸಭೆಗಳು ನಡೆಯುತ್ತಿವೆ ವಿನಃ ಕಾರ್ಯಮಾತ್ರ ಶೂನ್ಯ,. ಭೂ ಸ್ವಾದೀನದ ಸಮಸ್ಯೆಗಳು ಕಾಣದ ಕೈಗಳಿಂದ ಮತ್ತಷ್ಟು ಜಟಿಲವಾಗುತ್ತಲೇ ಸಾಗಿವೆ. ರಾಜಕೀಯ ಮೇಲಾಟ ಹಾಗೂ ಪ್ರತಿಷ್ಠೆ ಒಳನುಸುಳಿ ಸಮೀಕ್ಷೆ ಕಾರ್ಯಕ್ಕೂ ಅಡ್ಡಿಯನ್ನುಂಟು ಮಾಡಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ವಿಬಿನ್ನ ಪಕ್ಷಗಳು ಆಡಳಿತದಲ್ಲಿರುವದರಿಂದ ಸಮಸ್ಯೆಗಳು ಅಷ್ಟು ಸರಳವಾಗಿ ಮುಗಿಯುವದಿಲ್ಲ ಎಂಬ ಚಿತ್ರಣ ಕಣ್ಣಮುಂದೆ ಬರುತ್ತದೆ. ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಾಕಷ್ಟು ಮುತುವರ್ಜಿವಹಿಸಿ, ನಿರಂತರವಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳ ಸಭೆ ನಡೆಸುವದಲ್ಲದೇ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ. ಅದಕ್ಕನುಗುಣವಾಗಿ ಕೇಂದ್ರದ ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು 2027ರ ಡಿಸೆಂಬರೊಳಗೆ ಆ ಮಾರ್ಗದಲ್ಲಿ ರೈಲು ಓಡಿಸಲಾಗುವದೆಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ಕಾಮಗಾರಿಯಲ್ಲಿ ಪ್ರಗತಿ ಕಂಡು ಬರುತ್ತಿಲ್ಲ. ಕಾರಣ ನಿರೀಕ್ಷಿಸಿದಂತೆ ರೈತರ ವಿರೋಧ, ರಾಜ್ಯ ಸರಕಾರದ ನಿರಾಸಕ್ತಿ ಧೋರಣೆ.
ಸುರೇಶ ಅಂಗಡಿ ಅವರ ಬಹುದೊಡ್ಡ ಕನಸಾಗಿದ್ದ, ಈ ಹಿಂದೆ ಅವರು ರೈಲ್ವೆ ಸಚಿವರಾಗಿದ್ದಾಗಲೇ ಬೆಳಗಾವಿ -ಕಿತ್ತೂರು- ಧಾರವಾಡ ರೈಲ್ವೆ ಯೋಜನೆಗೆ ಸ್ಪಷ್ಟ ರೂಪ ಸಿಕ್ಕಿತ್ತು. ವಿಶೇಷ ಮುತುವರ್ಜಿ ವಹಿಸಿ 2019ರಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿಸಿ, ಕೇಂದ್ರದಿಂದ ಹಣಕಾಸು ಅನುಮೋದನೆಯೂ ಸಿಕ್ಕಿತು. ಕೇಂದ್ರದ ಬಜೆಟನಲ್ಲಿ 900 ಕೋ.ರೂ.ಗಳ ಅನುದಾನವನ್ನು ಸಹ ತೆಗೆದಿಡಲಾಯಿತು. ಆದರೆ ಸುರೇಶ ಅಂಗಡಿ ಅವರ ಅಗಲಿಕೆಯ ನಂತರ ಯೋಜನೆ ಕಾರ್ಯರೂಪಕ್ಕೆ ಬರುವದರ ಬದಲು ವಿವಾದದ ಸುಳಿಯಲ್ಲಿ ಸಿಲುಕಿತು.
ಈ ಯೋಜನೆಗೆ ಮುಖ್ಯವಾಗಿರುವ ಭೂ ಸ್ವಾಧೀನ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ರಾಜ್ಯ ಸರಕಾರ ನಿರಾಸಕ್ತಿ ತೋರುತ್ತಿದೆ. ರಾಜಕೀಯ ಮೇಲಾಟಗಳ ಪರಿಣಾಮ ಭೂ ಸ್ವಾಧೀನ ಪ್ರಕ್ರಿಯೆ ಕೇವಲ ಕಾಗದದಲ್ಲಿಯೇ ಉಳಿದಿದೆ. ಒಟ್ಟು ೮೮೮ ಎಕರೆ ಪ್ರದೇಶದ ಸಮೀಕ್ಷೆ ಕಾರ್ಯ ನಡೆಯಬೇಕಿದ್ದು ಇನ್ನೂ 155 ಎಕರೆ ಕಾರ್ಯ ಬಾಕಿ ಉಳಿದಿದೆ. ಬಾಕಿ ಉಳಿದಿರುವ ಭೂಮಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇದೆ.
ಬೆಳಗಾವಿ ತಾಲೂಕಿನ ಕೆ ಕೆ ಕೊಪ್ಪ, ದೇಸೂರ, ಗರ್ಲಗುಂಜಿ, ರಾಜಹಂಸಘಡ, ನಂದಿಹಳ್ಳಿ, ನಾಗೇನಹಳ್ಳಿ, ನಾಗಿರಹಾಳ, ಹಲಗಿಮರಡಿ ಸೇರಿದಂತೆ ಸುಮಾರು 10 ಹಳ್ಳಿಗಳ ಕೆಲವು ರೈತರು ಭೂಮಿ ಕೊಡಲು ಹಿಂದೇಟು ಹಾಕಿರುವದು ಹಾಗೂ ಮಾರ್ಗ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸುತ್ತಿರುವದರಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ. ಸಮಸ್ಯೆ ನಿರ್ಮಾಣದಲ್ಲಿ ಆ ಭಾಗದ ರಾಜಕೀಯ ನಾಯಕರ ಕುಮ್ಮಕ್ಕು ಇರುವದು ಸ್ಪಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜ್ಯ ಸರಕಾರದ ಜವಾಬ್ದಾರಿ: ಸರಕಾರದ ಭೂಮಿ ಕಲ್ಪಿಸಿದರೆ ಮಾತ್ರ ನೂತನ ರೈಲು ಮಾರ್ಗದ ಕಾಮಗಾರಿ ಆರಂಭವಾಗುತ್ತದೆ. ಭೂಮಿ ನೀಡಬೇಕಾಗಿರುವದು ಸರಕಾರದ ಜವಾದ್ಬಾರಿ. ಹಿಂದಿನ ಸರಕಾರದ ಅವಧಿಯಲ್ಲಿ ಮಾರ್ಗ ಸಮೀಕ್ಷೆ ಕಾರ್ಯ ವೇಗವಾಗಿ ನಡೆದಿತ್ತು. ಆದರೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ ಸರಕಾರವು ಸಮೀಕ್ಷಾ ಕಾರ್ಯ ಮಾಡುವಲ್ಲಿ ಹಿಂದೆ ಸರಿದಿದೆ ಎಂಬ ಆರೋಪವಿದೆ.
ಒಟ್ಟು 73 ಕಿ.ಮೀ. ಉದ್ದದ ಈ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ 25 ಕಿ.ಮೀ. ಸರ್ವೆ ಕಾರ್ಯ ಮುಕ್ತಾಯವಾಗಿದೆ. ಇನ್ನುಳಿದ ಭೂಮಿ ಬೆಳಗಾವಿ ಜಿಲ್ಲೆಯಲ್ಲಿಯಲ್ಲಿದ್ದು, 48 ಕಿ.ಮೀ. ಭೂಮಿಯ ಸರ್ವೆ ಕಾರ್ಯ ನಡೆಯಬೇಕಿದೆ. ಅದರಲ್ಲಿ 11 ಕಿಲೋಮೀಟರ್ ಮಾತ್ರ ಸಮೀಕ್ಷೆ ಕಾರ್ಯ ಬಾಕಿ ಉಳಿದಿದೆ. ಈ ಯೋಜನೆಗೆ ಒಟ್ಟು 927.47 ಕೋ.ರೂ.ಗಳಷ್ಟು ವೆಚ್ಚವಾಗಲಿದೆ. ಅರ್ಧ ವೆಚ್ಚವನ್ನು ನೈರುತ್ಯ ರೈಲ್ವೆ ಭರಿಸಲಿದ್ದು, ರಾಜ್ಯ ಸರ್ಕಾರ ಉಚಿತ ಭೂಮಿ ಒದಗಿಸುವುದರ ಜೊತೆಗೆ ಕಾಮಗಾರಿಯ ವೆಚ್ಚದ ಅರ್ಧದಷ್ಟು ಹಣವನ್ನು ನೀಡಬೇಕಾಗುತ್ತದೆ. ಆದರೆ ರಾಜ್ಯ ಸರಕಾರವು ದಿಂದ ಸುಮಾರು 200 ರಿಂದ 300 ಕೋ.ರೂ.ಗಳನ್ನು ಪಾವತಿಸಬೇಕಾಗಿದೆ.
ಮಾರ್ಗ ಸಮೀಕ್ಷೆ ಮಾಡಿದ ಕಂಪನಿಗೆ ರಾಜ್ಯ ಸರಕಾರವು ಹಣ ನೀಡಿದರೆ ಮಾತ್ರ, ನಂತರ ಬೆಳಗಾವಿ ಜಿಲ್ಲೆಯಲ್ಲಿ ಸರ್ವೆ ಕಾರ್ಯ ಆರಂಭವಾಗುತ್ತದೆ. ಸರ್ವೆ ಮುಗಿದ ನಂತರ ಭೂಸ್ವಾದೀನ ಮಾಡಿ, ರೇಲ್ವೆ ಇಲಾಖೆಗೆ ಹಸ್ತಾಂತರಿಸದಾಗ ಕಾರ್ಯಾರಂಭ ಮಾಡಬಹುದು ಎಂಬುದು ರೇಲ್ವೆ ಅಧಿಕಾರಿಗಳ ಅಭಿಪ್ರಾಯ. ಶೀಘ್ರವೇ ಕಾಮಗಾರಿ ಮುಗಿಸಿ ರೈಲು ಓಡಿಸಿ ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರಕಾರವು ಉತ್ಸುಕವಾಗಿದ್ದರೂ ಕೂಡ ರಾಜ್ಯ ಸರಕಾರವು ಉದಾಶೀನ ಮನೋಭಾವನೆ ತೋರುತ್ತ ಕಾಮಗಾರಿ ವಿಳಂಬಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ.
ಭೂಮಿ ಕೊಡಲೊಪ್ಪದ ರೈತರ ಮನವೊಲಿಸಿ ಭೂಸ್ವಾದೀನ ಪಡಿಸಿಕೊಳ್ಳಲು ಗ್ರಾಮೀಣ ಕ್ಷೇತ್ರದ ನಾಯಕರು ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಕಾಮಗಾರಿ ಶೀಘ್ರವೇ ಕಾರ್ಯಾರಂಭ ಸಾಧ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.