ಕಿತ್ತೂರಿನಲ್ಲಿ ವಿಜಯ ಪತಾಕೆ ಹಾರಿಸಿದ ಕಾಂಗ್ರೆಸ್ನ ಬಾಬಾಸಾಹೇಬ ಪಾಟೀಲ. ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡಗೌಡರ ವಿರುದ್ದ 3390 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.77536 ಮತಗಳನ್ನು ಬಾಬಾಸಹೇಬ ಅವರು ಪಡೆದರೆ, 74543 ಮತಗಳನ್ನು ದೊಡಗೌಡರ ಅವರು ಪಡೆದರು. ಮತ ಎಣಿಕೆ ಪ್ರಾರಂಭದಲ್ಲಿ ಮಹಾಂತೇಶ ಮುನ್ನಡೆ ಕಾಯ್ದುಕೊಂಡಿದ್ದರು. ನಂತರ ಬಾಬಾಸಾಹೇಬ ಅವರು ನಿರಂತರ ಮುನ್ನಡೆ ಕಾಯ್ದುಕೊಂಡು ವಿಜಯದ ಮಾಲೆಯನ್ನು ಧರಿಸಿದರು.
ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಶಿವಾನಂದ ಕೌಜಲಗಿ ಅವರು ವಿಜಯಿಯಾಗಿದ್ದಾರೆ. ಮಹಾಂತೇಶ ಅವರು 57783 ಮತಗಳನ್ನು ಪಡೆದರೆ ಸಮೀಪದ ಬಿಜೆಪಿ ಅಭ್ಯರ್ಥಿ ಜಗದೀಶ ಮೆಟಗುಡ್ ಅವರು 54746 ಮತಗಳನ್ನು ಪಡೆದಿದ್ದಾರೆ. ಜಗದೀಶ ಮೆಟಗುಡ್ ಅವರನ್ನು 3000 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕೌಜಲಗಿ ಅವರು ಸೋಲಿಸಿದ್ದಾರೆ.
ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ, ಖಾನಾಪೂರದಿಂದ ವಿಠ್ಠಲ ಹಲಗೇಕರ ಅವರು ಅತ್ಯಧಿಕ ಮತಗಳ 54629 ಅಂತರದಿಂದ ವಿಜಯಿಯಾಗಿದ್ದಾರೆ. ಇವರ ಸಮೀಪದ ಪ್ರತಿಸ್ಫರ್ಧಿ ಕಾಂಗ್ರೆಸನ ಅಂಜಲಿ ನಿಂಬಾಳಕರ ಅವರು ಕೇವಲ 37205 ಮತಗಳನ್ನು ಪಡೆಯುವದರ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾರೆ. ಉತ್ತರದಿಂದ ಕಾಂಗ್ರೆಸ್ನ ಆಸಿಫ್ ಸೇಟ್, ಗ್ರಾಮೀಣದಲ್ಲಿ ಲಕ್ಷ್ಮಿ ಹೆಬ್ಬಾಳಕರ, ಯಮಕನಮರಡಿಯಲ್ಲಿ ಸತೀಶ ಜಾರಕಿಹೋಳಿ ಗೆಲುವು. ಖಾನಾಪೂರದಲ್ಲಿ ಬಿಜೆಪಿಯ ಅಭ್ಯರ್ಥಿ ವಿಠ್ಠಲ ಹಲಗೇಕರ ಅವರು 91834 ಮತಗಳನ್ನು ಪಡೆದರೆ ,ಕಾಂಗ್ರಸನ ಡಾ. ಅಂಜಲಿ ನಿಂಬಾಲಕರ ಅವರು ಕೇವಲ 37205 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 54629 ಮತಗಳಿಂದ ವಿಠ್ಠಲ ಹಲಗೇಕರ ಅವರು ಅಂಜಲಿ ನಿಂಬಾಳಕರ ಅವರನ್ನು ಸೋಲಿಸಿದ್ದಾರೆ.
ಅಥಣಿಯಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ ಸೇರಿ ಸ್ಫರ್ಧೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದ ಲಕ್ಷ್ಮಣ ಸವದಿ ಅವರು 131404 ಮತಗಳನ್ನು ಪಡೆಯುವದರ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಕೇವಲ 55282 ಮತಗಳನ್ನು ಪಡೆದು 76122 ಮತಗಳ ಅಂತರದಿಂದ ಹೀನಾಯವಾಗಿ ಸೋಲುಂಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಹೆದ್ದಾರಿಯಲ್ಲಿ ನಡೆದರೆ, ಬಿಜೆಪಿ ಕೇವಲ 7 ಸ್ಥಾನಗಳಲ್ಲಿ ವಿಜಯ ಸಾಧಿಸಿ ಸ್ವಲ್ಪಮಟ್ಟಿಗೆ ನಾವು ಗೆದ್ದಿದ್ದೇವೆ ಎಂದು ತೃಪ್ತಿಪಟ್ಟುಕೊಂಡಿದೆ.
ಜಿಲ್ಲೆಯ 18 ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆದಿದ್ದು, ನಗರದ ಆರ್ಪಿಡಿ ಮಹಾವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಸಂಜೆ 6 ಗಂಟೆಯ ವೇಳೆಗೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಹೊರಬಿತ್ತು.
11ರಲ್ಲಿ ಕಾಂಗ್ರೆಸ್ ಗೆಲುವು: ಚಿಕ್ಕೋಡಿಯಲ್ಲಿ ಗಣೇಶ ಹುಕ್ಕೇರಿ ಅವರು ರಾಜ್ಯದಲ್ಲಿಯೇ ಅತ್ಯಧಿಕ 78 ಸಾವಿರ ಮತಗಳ ಅಂತರದಿಂದ ಗೆಲುವಿನ ದಾಖಲೆ ರಚಿಸಿದ್ದಾರೆ. ಅತೀ ಜಿದ್ದಾಜಿದ್ದಿನ ಕ್ಷೇತ್ರವಾದ ಅಥಣಿಯಲ್ಲಿಯೂ ಕೂಡ ಲಕ್ಷ್ಮಣ ಸವದಿ ಅವರು ಅತೀ ಹೆಚ್ಚು ಮತಗಳನ್ನು ಪಡೆಯುವದರ ಮೂಲಕ ವಿಜಯಿಯಾದರೆ, ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ನಿರೀಕ್ಷೆಯಂತೆ ವಿಜಯದ ನಗೆ ಬೀರಿದರು. ಕಾಗವಾಡದಲ್ಲಿ ರಾಜು ಕಾಗೆ, ಕುಡಚಿಯಲ್ಲಿ ಮಹೇಂದ್ರ ತಮ್ಮಣ್ಣವರ್, ಯಮಕನಮರಡಿಯಲ್ಲಿ ಸತೀಶ ಜಾರಕಿಹೊಳಿ, ಬೆಳಗಾವಿ ಉತ್ತರದಲ್ಲಿ ರಾಜು ಸೇಠ್, ಕಿತ್ತೂರಿನಲ್ಲಿ ಬಾಬಾಸಾಹೇಬ ಪಾಟೀಲ್, ಬೈಲಹೊಂಗಲದಲ್ಲಿ ಮಹಾಂತೇಶ ಕೌಜಲಗಿ, ಸವದತ್ತಿಯಲ್ಲಿ ವಿಶ್ವಾಸ ವೈದ್ಯ, ರಾಮದುರ್ಗದಲ್ಲಿ ಅಶೋಕ ಪಟ್ಟಣ ಅವರು ಕಾಂಗ್ರೆಸ್ಗೆ ಗೆಲುವು ತಂದುಕೊಟ್ಟಿದ್ದಾರೆ.
ರಮೇಶ ಜಾರಕಿಹೊಳಿ ಸವಾಲು ಸ್ವೀಕರಿಸಿದ್ದ ಸ್ವಾಭಿಮಾನಿ ಲಕ್ಷ್ಮಣ ಸವದಿ ಅವರು ಅಥಣಿಯಲ್ಲಿ 76 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ಮಹೇಶ ಕುಮಠಳ್ಳಿ ಅವರನ್ನು ಸೋಲಿಸಿದರೆ, ಬೆಳಗಾವಿ ಗ್ರಾಮೀಣದಲ್ಲೂ ಲಕ್ಷ್ಮೀ ಹೆಬ್ಬಾಳಕರ್ ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ಗೆದ್ದು, ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕ ಅವರನ್ನು ಬೆಂಬಲಿಸಿದ್ದ ರಮೇಶ ಜಾರಕಿಹೊಳಿ ಅವರಿಗೆ ಪ್ರತ್ಯುತ್ತರ ನೀಡಲು ಸಫಲರಾದರು.
ಈ ಏಳಕ್ಕಿಳಿದ ಬಿಜೆಪಿ: 2018ರ ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನ ಗೆದ್ದಿತ್ತು. ಬಳಿಕ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ 3 ಸ್ಥಾನ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 13ಕ್ಕೆ ಏರಿತ್ತು. ಆದರೆ ಈ ಬಾರಿ ಬಿಜೆಪಿ 6 ಸ್ಥಾನಗಳನ್ನು ಕಳೆದುಕೊಂಡು ಕೇವಲ 7 ಸ್ಥಾನ ಮಾತ್ರ ಗೆಲ್ಲಲು ಸಫಲವಾಗಿದೆ.
ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ರಾಯಬಾಗದಲ್ಲಿ ದುರ್ಯೋಧನ ಐಹೊಳೆ, ಗೋಕಾಕದಲ್ಲಿ ರಮೇಶ ಜಾರಕಿಹೊಳಿ, ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲ್, ಅರಬಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಹುಕ್ಕೇರಿಯಲ್ಲಿ ನಿಖಿಲ್ ಕತ್ತಿ ಮತ್ತು ಖಾನಾಪುರದಲ್ಲಿ ವಿಠಲ ಹಲಗೇಕರ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು,
ಮಾಜಿ ಸಚಿವ ದಿ. ಉಮೇಶ ಕತ್ತಿ ಪತ್ರ ನಿಖಿಲ್ ಕತ್ತಿ ಹಾಗೂ ವಿಠಲ ಹಲಗೇಕ ಮೊದಲ ಬಾರಿಗೆ ಶಾಸಕರಾಗಿದ್ದರೆ, ದುರ್ಯೋಧನ ಐಹೊಳೆ, ಬಾಲಚಂದ್ರ ಜಾರಕಿಹೋಳಿ, ರಮೇಶ ಜಾರಕಿಹೋಳಿ, ಶಶಿಕಲಾ ಜೊಲ್ಲೆ ಹಾಗೂ ಅಭಯ ಪಾಟೀಲ ಅವರು ತಮ್ಮ ಶಾಸಕತ್ವವನ್ನು ಉಳಿಸಿಕೊಂಡಿದ್ದಾರೆ.
ಪಕ್ಷಾಂತರಗೊಂಡು 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಮೂವರ ಪೈಕಿ ರಮೇಶ ಜಾರಕಿಹೋಳಿ ಅವರೊಬ್ಬರು ಮಾತ್ರ ವಿಜಯಿಯಾಗಿದ್ದು, ಅಥಣಿಯಲ್ಲಿ ಶ್ರೀಮಂತ ಪಾಟೀಲ ಹಾಗೂ ಕಾಗವಾಡದಲ್ಲಿ ಮಹೇಶ ಕುಮಠಳ್ಳಿ ಸೋಲನ್ನು ಅನುಭವಿಸಿದ್ದಾರೆ.