ಬೆಂಗಳೂರು, : ಧಾರವಾಡ -ಕಿತ್ತೂರು- ಬೆಳಗಾವಿ ನೇರ ರೈಲು ಯೋಜನೆಗೆ ಸಂಬಂಧಿಸಿ ರಾಜ್ಯ ಮೂಲ ಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ ಅವರು ಬೆಂಗಳೂರಿನಲ್ಲಿಂದು ಅಧಿಕಾರಿಗಳ ಜೊತೆ ಸಭೆ ನಡೆಸಿ,ಭೂಮಿ ಹಸ್ತಾಂತರವಾದರೆ 2027ರ ಕೊನೆಯ ವೇಳೆಗೆ ಕಾಮಗಾರಿ ಮುಗಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದರು.
ರೈಲ್ವೆ ಜತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವ ರಾಜ್ಯದ ಗದಗ-ವಾಡಿ, ಧಾರವಾಡ- ಬೆಳಗಾವಿ, ತುಮಕೂರು- ದಾವಣಗೆರೆ, ತುಮಕೂರು- ರಾಯದುರ್ಗ ಸೇರಿದಂತೆ ಹಲವು ರೈಲ್ವೆ ಯೋಜನೆಗಳಿಗೆ ಎದುರಾಗಿರುವ ಭೂಸ್ವಾಧೀನ ಅಡೆತಡೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮತ್ತು ಯೋಜನೆಗಳ ತ್ವರಿತ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಧಾರವಾಡ-ಬೆಳಗಾವಿ ಯೋಜನೆ ಆದಷ್ಟು ಬೇಗನೇ ಕಾರ್ಯಗತವಾಗಬೇಕು. ಧಾರವಾಡ-ಬೆಳಗಾವಿ ನಡುವೆ ಈಗಿನ ರೈಲು ಪ್ರಯಾಣ ಈಗ ಪ್ರಯಾಸಕರವಾಗಿದೆ. ಇದನ್ನು ನಾವು ಸುಗಮಗೊಳಿಸಬೇಕಿದೆ. ಇದಕ್ಕಾಗಿ 888 ಎಕರೆ ಭೂಮಿ ಅವಶ್ಯವಿದ್ದು, ಭೂ ಹಸ್ತಾಂತರವಾಗದೇ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಭೂಮಿ ಹಸ್ತಾಂತರವಾದರೆ 2027ರ ಕೊನೆಯ ವೇಳೆಗೆ ಕಾಮಗಾರಿ ಮುಗಿಸಬಹುದು. ಈ ಸಂಬಂಧ ಅವರು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಳರ ಮತ್ತು ಸಂತೋಷ್ ಲಾಡ್ ಇಬ್ಬರನ್ನೂ ಸೇರಿಸಿಕೊಂಡು ಸಭೆ ನಡೆಸಲು ಸಚಿವರು ಸಲಹೆ ನೀಡಿದರು.
ಸಭೆಯಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ ಮೂರ್ತಿ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ನೈರುತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಜಯ ಶರ್ಮಾ, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮೂರ್ತಿರಾಜು ಸೇರಿದಂತೆ ನೈರುತ್ಯ ರೈಲ್ವೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.