ಬೆಳಗಾವಿ : ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ಸಿವಿಲ್ ಪ್ರದೇಶವನ್ನು ಗುರುತಿಸಿ ಕರಡು ಪ್ರಸ್ತಾವನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಶೆಟ್ಟರ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ನಾಗರೀಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಸ್ತಾವನೆ ತಯಾರಿಸುವ ಬಗ್ಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡುವಂತೆ ತಿಳಿಸಿದರು.
ದಂಡು ಮಂಡಳಿ ವ್ಯಾಪ್ತಿಯ ನೋಟಿಫೈಡ್ ನಾಗರೀಕ ಪ್ರದೇಶವನ್ನು ಮಾತ್ರ ಅಧಿಕಾರಿಗಳು ಗುರುತಿಸಿ ಉಳಿದ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಕರಡು ಪ್ರಸ್ತಾವನೆಯಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ಕೇವಲ “ಬಜಾರ ಏರಿಯಾ” ಮಾತ್ರ ಪರಿಗಣಿಸಿ “ಬಂಗಲೋ ಏರಿಯಾ” ಮಾಡಿರಲ್ಲಿಲ್ಲ. ದಂಡು ಮಂಡಳಿ ಸಭೆಯಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ, ಸಾರ್ವಜನಿಕ ವಲಯದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.
ರಕ್ಷಣಾ ಸಚಿವಾಲಯದ ನಿರ್ದೇಶಗಳಡಿಯಲ್ಲಿಯೇ ಪ್ರಸ್ತಾಪಿತ ಕರಡು ಪ್ರಸ್ತಾವನೆ ತಯಾರಿಸುವಂತೆ ಕಟ್ಟು ನಿಟ್ಟಿನ ಸೂಚನೆಯನ್ನು ಬೆಳಗಾವಿ ದಂಡು ಮಂಡಳಿ ಅಧಿಕಾರಿಗಳಿಗೆ ನೀಡುವುದಾಗಿ ರಾಜನಾಥ ಸಿಂಗ್ ಭರವಸೆ ನೀಡಿದರು ಎಂದು ಸಂಸದ ಜಗದೀಶ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.