ಬೆಳಗಾವಿ : ಬೆಳಗಾವಿ ಜನತೆಯ ಅತ್ಯಂತ ಮಹತ್ವಾಕಾಂಕ್ಷಿ ಕನಸುಗಳಲ್ಲಿ ಒಂದಾಗಿರುವ ವಂದೇ ಭಾರತ್ ಸದ್ಯಕ್ಕಂತು ಬೆಳಗಾವಿಗೆ ಬರುವ ಯಾವ ಸೂಚನೆಯೂ ಇಲ್ಲ.
ಈ ಬಗ್ಗೆ ವಿಧಾನಪರಿಷತ್ ನಲ್ಲಿ ಮೂಲಭೂತ ಸೌಕರ್ಯಗಳ ಖಾತೆ ಸಚಿವ ಎಂ.ಬಿ.ಪಾಟೀಲ ಅವರು, ಕಾಂಗ್ರೆಸ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಪ್ರಶ್ನೆಗೆ ಉತ್ತರ ನೀಡಿ, ಬೆಳಗಾವಿಗೆ ವಂದೇ ಭಾರತ ರೈಲು ವಿಸ್ತರಿಸಲು ಮೂಲಭೂತ ಸೌಕರ್ಯಗಳ ಕೊರತೆ ಸರಿ ಇಲ್ಲ, ಹೀಗಾಗಿ ರೈಲ್ವೆ ಇಲಾಖೆ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಮಾಹಿತಿ ನೀಡಿದರು.
ಇದರಿಂದ ಕೆಂಡಾಮಂಡಲಗೊಂಡ ಪ್ರಕಾಶ ಹುಕ್ಕೇರಿ ಅವರು, ವಂದೇ ಭಾರತ್ ವಿಶೇಷ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಬೇಕು. ಈಗಾಗಲೇ ರೈಲ್ವೆ ಇಲಾಖೆ ಟ್ರಯಲ್ ರನ್ ಮಾಡಿದೆ. ಆದರೆ, ಈಗ ಮೂಲಭೂತ ಸೌಕರ್ಯಗಳ ಕೊರತೆ ಹೇಳಿ ಯೋಜನೆ ವಿಸ್ತರಣೆ ಮಾಡುವುದಿಲ್ಲ ಎಂದಿದೆ. ಇದನ್ನು ನಾವು ಒಪ್ಪುವುದಿಲ್ಲ. ಈ ಕೂಡಲೇ ಬೆಳಗಾವಿಗೆ ವಂದೇ ಭಾರತ್ ರೈಲನ್ನು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಂದೇ ಭಾರತ್ ರೈಲನ್ನು ವಿಸ್ತರಣೆ ಮಾಡದೇ ಇದ್ದಲ್ಲಿ ರಾಜ್ಯ ಸರಕಾರ ರೈಲ್ವೆ ಯೋಜನೆಗಳಿಗೆ ಬಿಡುಗಡೆ ಮಾಡುವ ಹಣವನ್ನು ತಡೆಯಿರಿ ಎಂದು ಅವರು ರಾಜ್ಯ ಸರಕಾರದ ಮೇಲೆ ಬಲವಾದ ಒತ್ತಡ ತಂದರು.
ಮೂಲಸೌಕರ್ಯ ಕೊರತೆ ನೆಪ: ವಂದೇ ಭಾರತ ಬರಲ್ವಂತೆ ಬೆಳಗಾವಿಗೆ !
