ಬೆಳಗಾವಿ : ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಈಗ ಈರುಳ್ಳಿಗೆ ಬಂಪರ್ ಬೆಲೆ. ಈ ವರ್ಷ ಈರುಳ್ಳಿ ಬೆಳೆದ ರೈತರು ಸಂತಸಕೊಂಡಿದ್ದಾರೆ. ಈ ಸಲ ಮಳೆ ಹೆಚ್ಚು. ಆದರೆ, ನಿರೀಕ್ಷೆಗೆ ತಕ್ಕಷ್ಟು ಇಳುವರಿ ಬಂದಿಲ್ಲ. ಇಳುವರಿ ಬಂದ ಈರುಳ್ಳಿಯನ್ನು ಬೆಳಗಾವಿ ಎಪಿಎಂಸಿ ತಂದು ಮಾರಿರುವ ರೈತರಿಗೆ ಭರ್ಜರಿ ಹಣ ಸಿಕ್ಕಿದೆ.
ಈರುಳ್ಳಿ ಈಗ ಕ್ವಿಂಟಾಲ್ ಗೆ ಆರುವರೆ ಸಾವಿರವರೆಗೂ ಮಾರಾಟವಾಗಿದೆ. ಇದು ದಾಖಲೆ ಬೆಲೆ ಎನ್ನುತ್ತಾರೆ ವ್ಯಾಪಾರಿಗಳು ಹಾಗೂ ರೈತರು. ಬೆಳಗಾವಿ ಮಾರುಕಟ್ಟೆಗೆ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರೈತರು ಈರುಳ್ಳಿ ಮಾರಾಟಕ್ಕೆ ತರುತ್ತಾರೆ. ಜೊತೆಗೆ ಮಹಾರಾಷ್ಟ್ರದ ರೈತರು ಸಹ ಬೆಳಗಾವಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಪಶ್ಚಿಮ ಬಂಗಾಳ, ಗೋವಾ, ಕರ್ನಾಟಕಕ್ಕೆ ಬೆಳಗಾವಿ ಮಾರುಕಟ್ಟೆಯಿಂದಲೇ ಈರುಳ್ಳಿ ರಫ್ತಾಗುತ್ತದೆ. ಈ ಸಲ ಮಳೆಯಿಂದ ಹಾನಿಯಾಗಿ ಆವಕ ಕಡಿಮೆಯಾಗಿದೆ. ಆದ್ದರಿಂದ ದರ ಹೆಚ್ಚಾಗಿದೆ. ಬುಧವಾರದಂದು 2200 ರಿಂದ 6500 ವರೆಗೆ ಈರುಳ್ಳಿ ಕ್ವಿಂಟಾಲ್ ಗೆ ಮಾರಾಟವಾಗಿದೆ. ಹಾಗೆ ₹ 2,773 ಕ್ವಿಂಟಾಲ್ ಅವಕಗೊಂಡಿದೆ.
ವ್ಯಾಪಾರಿ ಸಂಭಾಜಿ ಪ್ರತಿಕ್ರಿಯೆ ನೀಡಿ, ನಮ್ಮಲ್ಲಿ ಸಣ್ಣ ಗಾತ್ರದ ಈರುಳ್ಳಿ ಒಂದು ಸಾವಿರ ರೂ., ಮಧ್ಯಮ ಗಾತ್ರದ ಈರುಳ್ಳಿಗೆ
₹ 3000 ದಿಂದ 4.500 ಹಾಗೂ ದೊಡ್ಡ ಗಾತ್ರದ ಈರುಳ್ಳಿ ₹ 6,000 ವರೆಗೆ ಮಾರಾಟವಾಗಿದೆ. ಇದು ಉತ್ತಮ ಬೆಲೆ. ರೈತರಿಗೆ ಸಂತಸ ತಂದಿದೆ ಎಂದು ಹೇಳಿದರು.
ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೆ.ಎಚ್. ಗುರುಪ್ರಸಾದ್ ಮಾತನಾಡಿ, ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಹಾಗಾಗಿ ಈರುಳ್ಳಿ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ
ಆವಕವೂ ಕಡಿಮೆ. ದರದಲ್ಲಿ ಏರಿಕೆ ಕಂಡಿದೆ. ಒಂದು ಸಾವಿರದಿಂದ ಆರೂವರೆ ಸಾವಿರದವರೆಗೆ ಕ್ವಿಂಟಾಲ್ ಗೆ ಈರುಳ್ಳಿ ಮಾರಾಟವಾಗಿದೆ ಎಂದು ತಿಳಿಸಿದರು.
ಮುಧೋಳ ತಾಲೂಕಿನ ಮುದ್ದಾಪುರದ ರೈತ ವೆಂಕಣ್ಣ ಹಲಗಲಿ ಮಾತನಾಡಿ, ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ದರ. ಆರುವರೆ ಸಾವಿರ ರೂಪಾಯಿ ದರ ಸಿಕ್ಕಿದೆ. 58 ಚೀಲ ಈರುಳ್ಳಿ ತಂದಿದ್ದೇನೆ. 15 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು ಎಕರೆಗೆ 40 ರಿಂದ 50,000 ಖರ್ಚು ಮಾಡಿದ್ದೇವೆ. ಈ ವರ್ಷ ಈರುಳ್ಳಿಯಿಂದ 22 ಲಕ್ಷ ರೂಪಾಯಿ ಲಾಭದ ನಿರೀಕ್ಷೆ ಇದೆ ಎಂದು ತಿಳಿಸಿದರು.
