ಬೆಳಗಾವಿ: ಬೆಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಸರಕಾರದ ಗಮನ ಸೆಳೆದರು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಬೈಲಹೊಂಗಲ
ಡಿಪೋದಲ್ಲಿ ಲಕ್ಷಾಂತರ ಕಿಲೋ ಮೀಟರ್ ಓಡಿದ ಹಳೆಯ ಬಸ್ಸುಗಳಿವೆ. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ. ಬೈಲಹೊಂಗಲ ಡಿಪೋ ಗೆ ಹೊಸ ಬಸ್ ನೀಡಬೇಕು ಎಂದು ಸಾರಿಗೆ ಸಚಿವರಲ್ಲಿ ವಿನಂತಿಸಿದರು.
ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಬೆಳಗಾವಿ ರಾಜ್ಯದಲ್ಲೇ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಕಾಗವಾಡ ಮತಕ್ಷೇತ್ರದಲ್ಲಿ ಕೃಷ್ಣಾ ನದಿ ಹರಿಯುತ್ತಿದೆ. ಹೀಗಾಗಿ ಮೀನುಗಾರಿಕೆ ಅಧಿಕ ಪ್ರಮಾಣದಲ್ಲಿ ಇದೆ. ಆದರೆ, ಮೀನುಗಾರಿಕಾ ಇಲಾಖೆ ಕೇವಲ ಆರರಿಂದ ಏಳು ಜನ ಮೀನುಗಾರರಿಗಷ್ಟೇ ಮನೆಗಳನ್ನು ಮಂಜೂರು ಮಾಡಿದೆ. ಕೆಲವೇ ಮೀನುಗಾರರಿಗೆ ಬೈಕ್ ಮತ್ತು ಕಿಟ್ ನೀಡಿದೆ. ಬೆಳಗಾವಿ ಜಿಲ್ಲೆಯ ಮೀನುಗಾರರ ಕ್ಷೇಮಾಭಿವೃದ್ಧಿಗೆ ಸರಕಾರ ಅನುದಾನ ನೀಡಬೇಕು ಎಂದು ಶಾಸಕರು ವಿನಂತಿಸಿದರು.
ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ ಹಾಗೂ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ಖಾಲಿ ಇರುವ ಸರ್ವೇಯರ್ ಮತ್ತು ಎಡಿ ಎಲ್ ಆರ್ ಹುದ್ದೆಗಳನ್ನು ತುಂಬುವಂತೆ ಕಂದಾಯ ಸಚಿವರ ಗಮನ ಸೆಳೆದರು.
ಬೈಲಹೊಂಗಲಕ್ಕೆ ನೂತನ ಬಸ್ ಪೂರೈಸಿ: ಕೌಜಲಗಿ
